ಸೋದೆ ಮಠದ ಪರ್ಯಾಯಕ್ಕೆ ಮೊದಲ ಹೆಜ್ಜೆ : ಬಾಳೆ ಮಹೂರ್ತ ಸಂಪನ್ನ
ಉಡುಪಿ: 2028ರ ಜನವರಿ 18ರಂದು ನಡೆಯಲಿರುವ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯೋತ್ಸವದ ಪೂರ್ವಭಾವಿ ಸಿದ್ಧತೆಗಳ ಮೊದಲನೆಯದಾದ ‘ಬಾಳೆ ಮುಹೂರ್ತ’ ಭಾನುವಾರ (ನವೆಂಬರ್ 29, 2026) ಸೋದೆ ಮಠದ ಆವರಣದಲ್ಲಿ ಸಂಪನ್ನಗೊಂಡಿತು
ಧಾರ್ಮಿಕ ವಿಧಿವಿಧಾನಗಳು. ಮುಂಜಾನೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಚಂದ್ರೇಶ್ವರ, ಅನಂತೇಶ್ವರ ಹಾಗೂ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು. ಬಳಿಕ ಮಠದ ತೋಟದಲ್ಲಿ ಬಾಳೆ ಗಿಡದ ಜೊತೆಗೆ ಕೃಷ್ಣನ ಪೂಜೆಗೆ ಅಗತ್ಯವಿರುವ ಕಬ್ಬು ಮತ್ತು ತುಳಸಿ ಗಿಡಗಳನ್ನು ನೆಡುವ ಮೂಲಕ ಮುಹೂರ್ತ ನೆರವೇರಿಸಲಾಯಿತು..

ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರೊಂದಿಗೆ ಸೇರಿಕೊಂಡು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಭೋಜೆಗೌಡ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ನೂರಾರು ವಿದ್ವಾಂಸರು, ಭಕ್ತರ ನಡುವೆ ಬಾಳೆ ಮುಹೂರ್ತ ನೆರವೇರಿಸಿದರು.
ಶ್ರೀ ದೇವರ ಪ್ರಾರ್ಥನೆ ನಡೆಸಿದ ಬಳಿಕ ಬಾಳೆಗಿಡ, ತುಳಸಿ, ಕಬ್ಬುಗಳನ್ನು ಆನೆ, ಬಿರುದು ಬಾವಲಿ, ವಾದ್ಯ, ಚೆಂಡೆಗಳೊಂದಿಗೆ ರಥಬೀದಿಗೆ ಒಂದು ಸುತ್ತು ತರಲಾಯಿತು. ಬಳಿಕ ಕಾಣಿಯೂರು ಮಠದ ಹಿಂಭಾಗದಲ್ಲಿ ಭೂಮಿಯನ್ನು ಪೂಜಿಸಲಾಯಿತು. ಅಷ್ಟಮಠಗಳು ಸೇರಿದಂತೆ, ಮೂಲ ಮಠಗಳಿಗೆ ದಾನ ಸಮರ್ಪಿಸಿ, ವೈದಿಕ ಕಾರ್ಯ ನೆರವೇರಿಸಿದ ಬಳಿಕ ಬಾಳೆ, ತುಳಸಿ, ಕಬ್ಬು ನೆಡಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರ್ ಸ್ವಾಮಿ ಹಲವಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಇದೊಂದು ಪವಿತ್ರವಾದ ಕಾರ್ಯವಾಗಿದ್ದು ಇದರಲ್ಲಿ ಭಾಗವಹಿಸಿದ ತೃಪ್ತಿ ನನಗೆ ದೊರೆತಿದೆ ಎಂದರು.
ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ ಉಡುಪಿ ಅನ್ನಬ್ರಹ್ಮನ ಕ್ಷೇತ್ರವಾಗಿದ್ದು ಇಲ್ಲಿಗೆ ಬರುವ ಭಕ್ತರಿಗೆ ನಿರಂತರ ಅನ್ನದಾನ ನಡೆಯುತ್ತಿರುತ್ತದೆ. ಅನ್ನದಾನಕ್ಕೆ ಬೇಕಾದ ಸಲಕರಣೆಗಳ ಕೊರತೆಯಾಗಬಾರದು ಎಂಬುದು ಹಿಂದಿನವರ ಆಶಯವಾಗಿತ್ತು. ಬೇಕಾದಷ್ಟು ಬಾಳೆ ಎಲೆ ಇಲ್ಲೇ ಸಿಗುವಂತಾಗಬೇಕು ಎಂಬ ಕಾರಣಕ್ಕೆ ಹಿಂದೆ ಪರ್ಯಾಯ ಪೂರ್ವವಾಗಿ ಬಾಳೆ ಮಹೂರ್ತ ನೆರವೇರಿದೆ ಈ ಮೂಲಕ ಕೃಷ್ಣನ ಪೂಜೆಗೆ ಹಾಗೂ ಅನ್ನದಾನಕ್ಕೆ ಬೇಕಾದ ಬಾಳೆಎಲೆ, ಬಾಳೆಹಣ್ಣುಗಳನ್ನು ಮಠದಲ್ಲಿ ಬೆಳೆಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎಂದರು.
ಉಡುಪಿ ಅಷ್ಟಮಠಗಳ ಪರಂಪರೆಯಲ್ಲಿ ಪರ್ಯಾಯ ಪೀಠಾರೋಹಣಕ್ಕೂ ಮೊದಲು ನಾಲ್ಕು ಪ್ರಮುಖ ಪೂರ್ವಭಾವಿ ಮುಹೂರ್ತಗಳನ್ನು ನಡೆಸಲಾಗುತ್ತದೆ. ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನ ಪೂಜೆ ಹಾಗೂ ಅನ್ನಸಂತರ್ಪಣೆಗೆ (ಬಾಳೆ ಎಲೆ ಮತ್ತು ಬಾಳೆಹಣ್ಣು) ಯಾವುದೇ ಕೊರತೆಯಾಗದಂತೆ ಮುಂಚಿತವಾಗಿಯೇ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದು ಬಾಳೆ ಮುಹೂರ್ತದ ಉದ್ದೇಶವಾಗಿದೆ. ಇದರ ನಂತರ ಮುಂದಿನ ಹಂತಗಳಲ್ಲಿ ಅಕ್ಕಿ ಮುಹೂರ್ತ ( ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿವೆ.












