ಅಕ್ಟೋಬರ್ 25 ರಂದು ಪಿಲಿಕುಳದಲ್ಲಿ ಮತ್ಸ್ಯ ಮೇಳ
ಮಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಪಿಲಿಕುಳದಲ್ಲಿರುವ ವಿವಿಧ ಪ್ರವಾಸೋದ್ಯಮ ಆಕರ್ಷಣೆಗಳನ್ನು ಸಾರ್ವಜನಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಚಯಿಸುವ ಹಾಗೂ ಪರಿಸರ, ಪ್ರಕೃತಿ ಮತ್ತು ಜಲಚರ ಸಂಪನ್ಮೂಲ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪಿಲಿಕುಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 9.30 ರಿಂದ ಪಿಲಿಕುಳದ ಲೇಕ್ ಗಾರ್ಡನ್ನ ಕೆರೆಯಲ್ಲಿ ಇರುವ ಮೀನುಗಳನ್ನು ಹಿಡಿಯುವ “ಮತ್ಸ್ಯ ಮೇಳ”, ಮೀನು ಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮ ಹಾಗೂ “ಮತ್ಸ್ಯ ಆಹಾರ ಮೇಳ”ವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಮತ್ಸ್ಯ ಮೇಳದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್ನ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ವಿಶೇಷ ಮೀನಿನ ಖಾದ್ಯಗಳ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ ಆಹಾರ ಮಳಿಗೆಗಳನ್ನು ತೆರೆಯಲು ಮಂಗಳೂರಿನ ಹೋಟೆಲ್ಗಳ ಆಸಕ್ತ ಉದ್ಯಮದಾರರು ತಮ್ಮ ಮಳಿಗೆಗಳನ್ನು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಆಸಕ್ತರು ಅಕ್ಟೋಬರ್ 22 ರೊಳಗೆ ದೂರವಾಣಿ ಸಂಖ್ಯೆ 0824-2263565 ಅನ್ನು ಸಂಪರ್ಕಿಸುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













