ಮಂಗಳೂರಿನಲ್ಲಿ ಜಿ.ಐ. ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: ಲೇಬಲ್ ಇಲ್ಲದ ಆಹಾರ ಉತ್ಪನ್ನಗಳು ಸೀಜ್
ಮಂಗಳೂರು: ಆಹಾರ ಉತ್ಪನ್ನಗಳನ್ನು ಮರುಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ನಗರದ ಫಳ್ನೀರ್ ಜಂಕ್ಷನ್ನಲ್ಲಿರುವ ಜಿ.ಐ. ಬೇಕರಿ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಅಕ್ಟೋಬರ್ 17ರಂದು ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ಸಿಹಿ ತಿಂಡಿ ಹಾಗೂ ತಿನಿಸುಗಳ ತಯಾರಿಕಾ ಘಟಕಗಳು ಮತ್ತು ಮಾರಾಟ ಮಳಿಗೆಗಳ ಪರಿಶೀಲನೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಪರಿಶೀಲನೆ ವೇಳೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮುಗಿಯುವ ದಿನಾಂಕ, ಬ್ಯಾಚ್ ಸಂಖ್ಯೆ ಹಾಗೂ ಎಫ್ಎಸ್ಎಸ್ಎಐ ಪರವಾನಗಿ ಸಂಖ್ಯೆಯ ವಿವರಗಳಿಲ್ಲದ ಆಹಾರ ಉತ್ಪನ್ನಗಳು ಪತ್ತೆಯಾಗಿವೆ. ನಿಯಮಾನುಸಾರ ಅಗತ್ಯ ಮಾಹಿತಿಗಳನ್ನು ನಮೂದಿಸದ ಆಹಾರ ಉತ್ಪನ್ನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಸೀಜ್ ಮಾಡಿ ಸೀಲ್ ಮಾಡಿದ್ದಾರೆ.













