ನ.27ರಂದು ಮಂಗಳೂರು ವಿಮಾನನಿಲ್ದಾಣದಲ್ಲಿ ಸಮಗ್ರ ಅಣಕು ಕಾರ್ಯಾಚರಣೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನವೆಂಬರ್ 27 ರಂದು ತನ್ನ ಮೊದಲ ಸಮಗ್ರ ಅಣಕು ಕಾರ್ಯಾಚರಣೆ ನಡೆಸಲಿದೆ. ಈ ಬಾರಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಂಭವಿಸುವ ವಿಮಾನ ಅಪಘಾತದ ಸನ್ನಿವೇಶವನ್ನು ಆಧರಿಸಿ ಅಣಕು ಕಾರ್ಯಾಚರಣೆ ನಡೆಯಲಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಓಆಒಂ) ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಈ ಅಣಕು ಕಾರ್ಯಾಚರಣೆ ನಡೆಯಲಿದ್ದು, ವಿಮಾನ ದುರಂತ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏರೋಡೋಮ್ ತುರ್ತು ಪರಿಹಾರ ಕಾರ್ಯಾಚರಣೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ಸಂಘಟಿತ ಪ್ರತಿಕ್ರಿಯೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡುವುದು ಇದರ ಉದ್ದೇಶವಾಗಿದೆ. ವಿಪತ್ತು ನಿರ್ವಹಣಾ ಅಭ್ಯಾಸದ ಭಾಗವಾಗಿ ನವೆಂಬರ್ 26ರಂದು ಟೇಬಲ್ ಟಾಪ್ ಕಾರ್ಯಾಚರಣೆ ನಡೆಯಲಿದೆ.
ವಿಮಾನ ನಿಲ್ದಾಣದ ಆವರಣದೊಳಗಿನ ತುರ್ತು ಪರಿಸ್ಥಿತಿಗಿಂತ ಭಿನ್ನವಾಗಿ, ಈ ಬಾರಿ ವಿಮಾನ ನಿಲ್ದಾಣದ ಗಡಿಗೆ ಹೊಂದಿಕೊಂಡಿರುವ ಸಮತಟ್ಟಾದ ಹೊರ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸಿದ ಸನ್ನಿವೇಶವನ್ನು ಸೃಷ್ಟಿಸಲಾಗುತ್ತದೆ. ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ತಂಡವು ಮೊದಲ ಸ್ಪಂದನಾ ತಂಡವಾಗಿ ಕಾರ್ಯನಿರ್ವಹಿಸಲಿದೆ. ತುರ್ತು ನಿರ್ವಹಣಾ ವ್ಯವಸ್ಥೆಗೆ ಅನುಗುಣವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕಮಾಂಡ್, ನಿಯಂತ್ರಣ ಮತ್ತು ಸಮನ್ವಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಈ ಸಮಗ್ರ ಅಣಕು ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮಂಗಳೂರು ನಗರ ಪೆÇಲೀಸ್, ಆರೋಗ್ಯ ಇಲಾಖೆ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರ ಸಂಬಂಧಿತ ಇಲಾಖೆ, ಸಂಸ್ಥೆಗಳು ಭಾಗವಹಿಸಲಿವೆ. ಗಂಭೀರ ವಿಮಾನ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸನ್ನದ್ಧತೆ, ಸ್ಪಂದಿಸುವ ಸಾಮಥ್ರ್ಯ ಹಾಗೂ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯವನ್ನು ಪರೀಕ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಕಾರ್ಯಾಚರಣೆಯು ತುರ್ತು ಕಾರ್ಯಾಚರಣೆಯ ಕೊರತೆಗಳನ್ನು ಗುರುತಿಸಲು, ನಿಗದಿತ ಕಾರ್ಯವಿಧಾನಗಳನ್ನು ಪರಿಶೀಲಿಸಲು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ.
ನವೆಂಬರ್ 27 ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುವ ಅಣಕು ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಮಾನ ನಿಲ್ದಾಣ, ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಭೆ ನಡೆಯಿತು.
ಅಪರ ಜಿಲ್ಲಾಧಿಕಾರಿ ಕೆ. ರಾಜು ಮಾತನಾಡಿ, ನ.26 ರಂದು ಬೆಳಿಗ್ಗೆ 9:55 ರಿಂದ 11:38 ಗಂಟೆಯವರೆಗೆ ಈ ಅಣಕು ಪ್ರದರ್ಶನ ನಡೆಯಲಿದೆ. ಈ ಕಾರ್ಯಾಚರಣೆಯನ್ನು ಎಲ್ಲಾ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯಾಚರಿಸಬೇಕು. ನೈಜ ಘಟನೆ ಆಗುವ ಸಂದರ್ಭದಲ್ಲಿ ಉಂಟಾಗುವ ಸಮನ್ವಯ ಕೊರತೆ ಹಾಗೂ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ (ಪ್ರಭಾರ) ಶ್ರೀಧರ್ ಮುಂದಲಮನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.













