ಮಂಗಳೂರಿನಲ್ಲಿ ಮದುವೆ ಸಮಾರಂಭದ ವೇಳೆ ಬಾಲಕಿಯ ಚಿನ್ನದ ಸರ ಕಳವು: 24 ಗಂಟೆಯೊಳಗೆ ಆರೋಪಿ ಮಹಿಳೆ ಬಂಧನ
ಮಂಗಳೂರು: ಮದುವೆ ಸಮಾರಂಭ ನಡೆಯುತ್ತಿದ್ದ ಸಭಾಂಗಣದಲ್ಲಿ ಮೂರೂವರೆ ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದು ಕಳವು ಮಾಡಿದ ಪ್ರಕರಣವನ್ನು ಬರ್ಕೆ ಠಾಣೆಯ ಪೊಲೀಸರು ಭೇದಿಸಿದ್ದು, ಘಟನೆ ನಡೆದ 24 ಗಂಟೆಯೊಳಗೆ ಆರೋಪಿತ ಮಹಿಳೆಯನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿತೆಯನ್ನು ಉಳ್ಳಾಲದ ಕೋಟೆಪುರದ ನಿವಾಸಿ, ಪ್ರಸ್ತುತ ಅಕ್ಕರಕೆರೆಯ ಆರ್ಸಿಸಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ 42 ವರ್ಷದ ಮಿನ್ನತ್ ಎಂದು ಗುರುತಿಸಲಾಗಿದೆ.
2026ರ ಅಕ್ಟೋಬರ್ 18ರಂದು ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಟಿ.ಎಂ.ಎ. ಪೈ ಹಾಲ್ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಮೂರೂವರೆ ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಸಹಿತ ಸುಮಾರು 10 ಗ್ರಾಂ ತೂಕದ, ಅಂದಾಜು ₹1.35 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯೊಬ್ಬರು ಎಳೆದುಕೊಂಡು ಕಳವು ಮಾಡಿದ್ದರು. ಈ ಸಂಬಂಧ ಶೀಮಾಬಾನು ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 304(2)ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಚಿನ್ನದ ಸರ ಕಳವು ಮಾಡಿದ ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಅಕ್ಟೋಬರ್ 19ರಂದು ಆರೋಪಿತೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಕೆಯ ಬಳಿಯಿಂದ ಕಳವು ಮಾಡಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತೆಯನ್ನು ಅಕ್ಟೋಬರ್ 20ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿತೆಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಐದು ಕಳವು ಪ್ರಕರಣಗಳು ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಅವು ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತೆಯು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ, ಈ ಪ್ರಕರಣದ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 112ರ ಅಡಿಯಲ್ಲಿ ಸಂಘಟಿತ ಅಪರಾಧದ ಅಂಶವನ್ನೂ ಸೇರಿಸಿ ತನಿಖೆ ಮುಂದುವರಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಬರ್ಕೆ ಪೊಲೀಸ್ ಠಾಣೆಯ ಪಿಎಸ್ಐಗಳಾದ ಗುರುಪ್ಪ ಕಾಂತಿ, ವಿನಾಯಕ ತೋರಗಲ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.













