ಸರ್ಕಾರಿ ಕಾರ್ಯಕ್ರಮಗಳು ಸರ್ಕಾರದ ಅನುದಾನದಲ್ಲಿಯೇ ನಡೆಯುತ್ತವೆ : ಕೆ. ವಿಕಾಸ್ ಹೆಗ್ಡೆ

Spread the love

ಸರ್ಕಾರಿ ಕಾರ್ಯಕ್ರಮಗಳು ಸರ್ಕಾರದ ಅನುದಾನದಲ್ಲಿಯೇ ನಡೆಯುತ್ತವೆ : ಕೆ. ವಿಕಾಸ್ ಹೆಗ್ಡೆ

  • ಪಂಚ ಗ್ಯಾರಂಟಿ ಸಮಾವೇಶ ಟೀಕಿಸುವ ಬಿಜೆಪಿ ಶಾಸಕರಿಗೆ ಮಾತನಾಡುವ ನೈತಿಕತೆ ಇಲ್ಲ

ಉಡುಪಿ: ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಲೇವಡಿ ಮಾಡಿದ್ದ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿಗೆ ಇದೀಗ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಅವುಗಳ ಭರವಸೆ ಕಾರ್ಡ್ಗಳನ್ನು ಮನೆಮನೆಗೆ ತಲುಪಿಸಿದಾಗ ಬಿಜೆಪಿ ನಾಯಕರು, ‘ಗ್ಯಾರಂಟಿಗೆ ವಾರಂಟಿ ಇಲ್ಲ, ಅದು ಪುಸ್ತಕದೊಳಗಿನ ನವಿಲು ಗರಿ’ ಎಂದು ಟೀಕಿಸಿದ್ದರು. ಇದೀಗ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ವಿರೋಧಿಸುತ್ತಿರುವುದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಗ್ರಾಮ ಪಂಚಾಯತ್ಗಳಿಂದ ಅನುದಾನ ಬಳಸಿದರೆ ತಪ್ಪೇನು ಎಂದು ಪ್ರಶ್ನಿಸಿರುವ ಅವರು, ಗ್ರಾಮ ಪಂಚಾಯತ್ಗಳು ಕೂಡ ಸರ್ಕಾರದ ಒಂದು ಭಾಗವಾಗಿದ್ದು, ಪಂಚಾಯತ್ ರಾಜ್ ಅಧಿನಿಯಮದಡಿ ಸರ್ಕಾರಿ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ಆರ್ಥಿಕ ಸದೃಢತೆ ಕಾಣುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವುದು ಹಾಗೂ ಮಧ್ಯಮ ವರ್ಗ ಮತ್ತು ಬಡವರ ಸಂಕಷ್ಟಗಳನ್ನು ಹೆಚ್ಚಿಸುವುದೇ ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಮೂರು ಅವಧಿಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತವನ್ನು ಗಮನಿಸಿದರೆ, ಅದಾನಿ ಮತ್ತು ಅಂಬಾನಿಯಂತಹ ಶ್ರೀಮಂತರ ಪರವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಮಧ್ಯಮ ವರ್ಗ ಹಾಗೂ ಬಡವರಿಗೆ ಸಂಕಷ್ಟ ತಂದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.

ಗ್ಯಾರಂಟಿ ಸಮಾವೇಶವನ್ನು ಟೀಕಿಸುತ್ತಿರುವ ಜಿಲ್ಲೆಯ ಬಿಜೆಪಿ ಶಾಸಕರು ಮೊದಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಲಿ. ಸರ್ಕಾರಿ ಕಾರ್ಯಕ್ರಮಗಳು ಸರ್ಕಾರದ ಅನುದಾನದಲ್ಲಿಯೇ ನಡೆಯುತ್ತವೆ ಎಂಬ ಕನಿಷ್ಠ ಜ್ಞಾನವನ್ನಾದರೂ ಬಿಜೆಪಿ ಶಾಸಕರು ಬೆಳೆಸಿಕೊಳ್ಳಬೇಕು ಎಂದು ಕೆ. ವಿಕಾಸ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments