ಏಕ ವಿನ್ಯಾಸ ನಕ್ಷೆಯ ಭಾಗಶ ಅನುಮೋದನೆಯ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವುದು ಸ್ವಾಗತಾರ್ಹ : ವಿನೋದ್ ಕ್ರಾಸ್ಟೊ

Spread the love

ಏಕ ವಿನ್ಯಾಸ ನಕ್ಷೆಯ ಭಾಗಶ ಅನುಮೋದನೆಯ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವುದು ಸ್ವಾಗತಾರ್ಹ : ವಿನೋದ್ ಕ್ರಾಸ್ಟೊ

ಕುಂದಾಪುರ: 25 ಸೆಂಟ್ಸ್ ಅಥವಾ 1000 ಚದರ ಮೀಟರ್ ಒಳಗಿನ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಸ್ಥಳೀಯ ಪಂಚಾಯಿತಿಗೆ ಸರಕಾರ ಅಧಿಕಾರ ನೀಡಿರುವುದು ಸ್ವಾಗತಾರ್ಹವೆಂದು ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳ ವಿಶೇಷವಾದ ಭೌಗೋಳಿಕ ಹಿನ್ನೆಲೆ ಮತ್ತು ಭೂ ಉಪಯೋಗಗಳಲ್ಲಿನ ಹೆಚ್ಚಿನ ಭೂ ಪ್ರದೇಶವು ತುಂಡು ಭೂಮಿ ಮಾದರಿಯಲ್ಲಿ ಅಭಿವೃದ್ಧಿ ಹೊಂದಿರುವುದರಿಂದ , ಕರಾವಳಿಗೆ ಪ್ರತ್ಯೇಕ ವಲಯ ನಿಯಮಗಳನ್ನು ರಚಿಸಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರದ ಒಕ್ಕೂಟ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಮಾತ್ರವಲ್ಲದೆ ಅಧಿಕಾರಿಗಳಿಗೆ ಇರುವ ಕಾನೂನು ತೊಡಕುಗಳ ಬಗ್ಗೆ ಸರಕಾರಕ್ಕೆ ಕಾಲಕಾಲಕ್ಕೆ ವಿವರಿಸಲಾಗಿತ್ತು .

ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಯತೀಂದ್ರ ಸಿದ್ದರಾಮಯ್ಯರವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು .

ಇದೀಗ ಸರಕಾರ ಈ ಬೇಡಿಕೆಗೆ ಸ್ಪಂದಿಸಿದ್ದು , ಈಗ 25 ಸೆಂಟ್ಸ್ ಒಳಗಿನ ಏಕ ವಿನ್ಯಾಸ ಅನುಮೋದನೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಿದೆ.

ಖಾಸಗಿ ರಸ್ತೆ , ಸರ್ಕಾರಿ ಸಂಪರ್ಕ ರಸ್ತೆಗಳ ಬಗ್ಗೆ ಇರುವ ಸಮಸ್ಯೆಗಳನ್ನು ಈಗಾಗಲೇ ಸರ್ಕಾರ ಬಗೆಹರಿಸಿದ್ದು  ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಿದೆ . ಕರಾವಳಿ ಜಿಲ್ಲೆಗಳನ್ನು ಹಿಲ್ಲ್ ಏರಿಯಾ ಆಗಿ ಪರಿಗಣಿಸಲಾಗಿದ್ದು , ಇದರಿಂದ ಕನಿಷ್ಠ ರಸ್ತೆಯ ಅಗಲ 6 ಮೀಟರ್ ಇಂದ 3.65 ಮೀಟರ್ ಪ್ರಯೋಜನವನ್ನು ನಮ್ಮ ಜಿಲ್ಲೆಗೂ ವಿಸ್ತರಿಸಿತ್ತು.

ಕುಂದಾಪುರ ನಗರ ಯೋಜನ ಪ್ರಾಧಿಕಾರದ ಕಾರ್ಯ ವ್ಯಾಪ್ತಿಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ 60 ಗ್ರಾಮ ಪಂಚಾಯಿತಿಗಳಿದ್ದು  , ಜನಸಾಮಾನ್ಯರಿಗೆ ಮನೆ ಕಟ್ಟಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಪಂಚಾಯತ್ ಮತ್ತು ಪುರಸಭೆಗಳಲ್ಲಿ ಅಧಿಕೃತ ಖಾತೆ ಪಡೆಯಲು ಈ ಹಿಂದೆ ಸಮಸ್ಯೆಯಾಗುತ್ತಿತ್ತು.

ಇಂದಿನ ಆದೇಶದಿಂದ , ಮನೆ ಕಟ್ಟುವ ಜನಸಾಮಾನ್ಯರಿಗೆ ಜಮೀನಿನ ಹಕ್ಕು ಪತ್ರ , ದಾಖಲೆ ಪತ್ರಗಳ ಸರಳಿಕ್ರತ ವ್ಯವಸ್ಥೆಗಾಗಿ  ರಾಜ್ಯ ಸರ್ಕಾರ ಜಾರಿಗೆ ತಂದ ಆರನೇ ಗ್ಯಾರೆಂಟಿಯಾದ ಭೂ ಗ್ಯಾರಂಟಿ ಯೋಜನೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.


Spread the love
Subscribe
Notify of

0 Comments