ಗುಂಡಿಬೈಲು ಮೈದಾನದ ಪಟಾಕಿ ಮಳಿಗೆಗಳ ಹರಾಜಿಗೆ ಹೈಕೋರ್ಟ್ ತಡೆಯಾಜ್ಞೆ
ಉಡುಪಿ: ನಗರದ ಗುಂಡಿಬೈಲು ಸಾರ್ವಜನಿಕ ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ಆರು ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ವಹಿಸಿಕೊಡಲು ಉಡುಪಿ ನಗರಸಭೆ ಪ್ರಕಟಿಸಿದ್ದ ಬಹಿರಂಗ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಉಡುಪಿ ನಗರಸಭೆಯು ನವೆಂಬರ್ 2, 2026ರಂದು ಹೊರಡಿಸಿದ್ದ ಅಲ್ಪಾವಧಿ ಮರು ಬಹಿರಂಗ ಹರಾಜು ಪ್ರಕಟಣೆಯಂತೆ (ಸಂಖ್ಯೆ: ಉನಸ.R1.ಸಿಆರ್.01/2026-27), ನವೆಂಬರ್ 6ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆರು ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು.
ಈ ಹರಾಜು ಪ್ರಕಟಣೆಯನ್ನು ಪ್ರಶ್ನಿಸಿ ಜಯರಾಜ್ ಅವರು ವಕೀಲರಾದ ತನೋಜ್ ಕುಮಾರ್ ಮತ್ತು ದಿಗಂತ್ ಜೈನ್ ಅವರ ಮೂಲಕ ಹೈಕೋರ್ಟ್‌ಗೆ ರಿಟ್ ಅರ್ಜಿ (W.P. No. 34308/2026) ಸಲ್ಲಿಸಿದ್ದರು.
ನವೆಂಬರ್ 5ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠವು, ನವೆಂಬರ್ 2ರಂದು ಹೊರಡಿಸಲಾದ ತಾತ್ಕಾಲಿಕ ಹರಾಜು ಪ್ರಕಟಣೆಯಡಿ ಕೈಗೊಳ್ಳಬೇಕಿದ್ದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 6ರಂದು ನಡೆಯಬೇಕಿದ್ದ ಬಹಿರಂಗ ಹರಾಜು ಪ್ರಕ್ರಿಯೆಯು ನ್ಯಾಯಾಲಯದ ತಡೆಯಾಜ್ಞೆಗೆ ಒಳಪಟ್ಟಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ಬಿಡ್‌ದಾರರು ಗಮನಹರಿಸುವಂತೆ ತಿಳಿಸಲಾಗಿದೆ.













