ಹಿರಿಯಡ್ಕ: ದನ ಕಳವು ಮಾಡಿ ಕಸಾಯಿಖಾನೆಗೆ ಸಾಗಾಟ: ಇಬ್ಬರ ಬಂಧನ, ಜಾನುವಾರುಗಳ ರಕ್ಷಣೆ

Spread the love

ಹಿರಿಯಡ್ಕ: ದನ ಕಳವು ಮಾಡಿ ಕಸಾಯಿಖಾನೆಗೆ ಸಾಗಾಟ: ಇಬ್ಬರ ಬಂಧನ, ಜಾನುವಾರುಗಳ ರಕ್ಷಣೆ

ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಬಳಿ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ, ವಧೆಗಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸಾಗಿಸುತ್ತಿದ್ದ ನಾಲ್ಕು ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಗೂಡ್ಸ್ ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಷ್ ನಗರದ ಸರ್ಕಾರಿಗುಡ್ಡೆಯ ಅಬ್ದುಲ್ ಸತ್ತರ್ (54) ಹಾಗೂ ಇನ್ನಂಜೆ ಗ್ರಾಮದ ಮಾಳದಬೆಟ್ಟಿನ ಯೋಗೀಶ ನಾಯ್ಕ್ (49) ಎಂದು ಗುರುತಿಸಲಾಗಿದೆ. ಅಕ್ಟೋಬರ್ 9ರಂದು ಸಂಜೆ ಹಿರಿಯಡ್ಕ ಪೊಲೀಸ್ ಠಾಣೆಯ ಎದುರಿನ ಅಂಜಾರು ಜಂಕ್ಷನ್ ಬಳಿ ಗೂಡ್ಸ್ ಟೆಂಪೋವನ್ನು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಅಂದು ಸಂಜೆ 7.30ರ ಸುಮಾರಿಗೆ ಹರಿಖಂಡಿಗೆಯಿಂದ ಹಿರಿಯಡ್ಕ ಕಡೆಗೆ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸರಿಗೆ ಲಭಿಸಿತ್ತು. ಅದರಂತೆ ಬೊಮ್ಮಾರಬೆಟ್ಟು ಗ್ರಾಮದ ಕೊಟ್ನಕಟ್ಟೆ ಬಳಿ ಪೊಲೀಸರು ವಾಹನವನ್ನು ಗಮನಿಸಿ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ, ಚಾಲಕ ವಾಹನವನ್ನು ನಿಲ್ಲಿಸದೆ ಮುಂದೆ ಸಾಗಿದ್ದರಿಂದ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಠಾಣೆಗೆ ತಿಳಿಸಿದ್ದರು. ಬಳಿಕ ಹಿರಿಯಡ್ಕ ಪೊಲೀಸ್ ಠಾಣೆಯ ಎದುರಿನ ಅಂಜಾರು ಜಂಕ್ಷನ್ ಬಳಿ ಸಿಬ್ಬಂದಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದರು.

ವಾಹನದೊಳಗೆ ನಾಲ್ಕು ಜಾನುವಾರುಗಳಿದ್ದು, ಚಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಇದ್ದರು. ಜಾನುವಾರುಗಳ ಬಗ್ಗೆ ವಿಚಾರಣೆ ನಡೆಸಿದಾಗ, ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಅವರ ಮನೆಯ ಸಮೀಪ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಾನುವಾರುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ನೈಲಾನ್ ಹಗ್ಗಗಳನ್ನು ಕಟ್ಟಿ, ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲಾದ ಜಾನುವಾರುಗಳ ಅಂದಾಜು ಮೌಲ್ಯ 20 ಸಾವಿರ ರೂ. ಹಾಗೂ ಸಾಗಾಟಕ್ಕೆ ಬಳಸಿದ ಗೂಡ್ಸ್ ಟೆಂಪೋವಿನ ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ನೇತೃತ್ವದಲ್ಲಿ, ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್ಐ (ಕಾ.ಸು.) ಪುನಿತ್ ಕುಮಾರ್ ಬಿ.ಇ. ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments