ಅಕ್ರಮವಾಗಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ: ಲಾರಿ ವಶಕ್ಕೆ, 17 ಜಾನುವಾರುಗಳ ರಕ್ಷಣೆ

Spread the love

ಅಕ್ರಮವಾಗಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ: ಲಾರಿ ವಶಕ್ಕೆ, 17 ಜಾನುವಾರುಗಳ ರಕ್ಷಣೆ

ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ EICHER ಲಾರಿಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಸೆಪ್ಟೆಂಬರ್ 22ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅವರು ಸಿಬ್ಬಂದಿ ಸಿದ್ದರಾಮ ಅವರೊಂದಿಗೆ ಇಲಾಖಾ ವಾಹನದಲ್ಲಿ ಬೆಳಗಿನ ಜಾವ ಮಾರ್ನಿಂಗ್ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, EICHER ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರು ವಾಹನಕ್ಕಾಗಿ ಕಾಯುತ್ತಿದ್ದಾಗ, ಬೆಳಗ್ಗೆ ಸುಮಾರು 6.30ರ ವೇಳೆಗೆ ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಕಂದು ಬಣ್ಣದ EICHER ಲಾರಿ ಕಾಣಿಸಿಕೊಂಡಿದೆ. ಪೊಲೀಸರು ಲಾರಿಯನ್ನು ಬೆನ್ನಟ್ಟಿ ಪಡೀಲ್‌ನ ಟೊಯೋಟಾ ಕಾರು ಶೋರೂಂ ಎದುರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಲಾರಿಯಲ್ಲಿದ್ದ ಓರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾನೆ.

ಲಾರಿಯನ್ನು ಪರಿಶೀಲಿಸಿದಾಗ ಚಾಲಕನನ್ನು ಸಾದಿಕ್ ಜಿ. (23), ತಂದೆ ದಿವಂಗತ ಗಪೂರ್, ಹಾಸನ ಜಿಲ್ಲೆ, ಎಂದು ಗುರುತಿಸಿ ವಶಕ್ಕೆ ಪಡೆಯಲಾಗಿದೆ.

ಲಾರಿಯ ಬಾಡಿಯನ್ನು ಹಸಿರು ಬಣ್ಣದ ಟಾರ್ಪಲಿನ್‌ನಿಂದ ಮುಚ್ಚಲಾಗಿತ್ತು. ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಒಟ್ಟು 17 ಜಾನುವಾರುಗಳು ಪತ್ತೆಯಾಗಿವೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಜಾನುವಾರುಗಳನ್ನು ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಲಾರಿಯ ಕಬ್ಬಿಣದ ಕ್ಯಾರೇಜ್‌ಗಳಿಗೆ ಕಟ್ಟಿ, ಕತ್ತುಗಳನ್ನು ಮೇಲಕ್ಕೆತ್ತಿ ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ Prevention of Cruelty to Animals Act ಕಲಂ 11(A), 11(D), Karnataka Prevention of Slaughter and Preservation of Cattle Act ಕಲಂ 6 ಹಾಗೂ BNS ಕಲಂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ 17 ಜಾನುವಾರುಗಳು, ಲಾರಿ ಹಾಗೂ ಆರೋಪಿ ಸಾದಿಕ್‌ನ ಮೊಬೈಲ್ ಫೋನ್ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾದಿಕ್‌ನನ್ನು ಬಂಧಿಸಲಾಗಿದೆ.

ಪ್ರಕರಣದಲ್ಲಿ ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಮತ್ತು ರೆಹಮಾನ್ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


Spread the love
Subscribe
Notify of

0 Comments