ಕಂಡ್ಲೂರು ಸೇತುವೆ ಬಳಿ ಅಕ್ರಮ ಮರಳು ಗಣಿಗಾರಿಕೆ: 11 ಮಂದಿ ಬಂಧನ
ಕುಂದಾಪುರ: ವರಾಹಿ ನದಿಯ ಕಂಡ್ಲೂರು ಬ್ರಿಡ್ಜ್ ಸಮೀಪ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕುಂದಾಪುರ ಗ್ರಾಮಾಂತರ ಪೊಲೀಸರು, ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ 4 ದೋಣಿಗಳು ಹಾಗೂ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಾಮಶಂಕರ ರಾಜಬೀರ್ (35), ರಾಮಕುಮಾರ್ (40), ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30), ಕಮಲೇಶ್ ನಿಸಾದ್ (35), ಸಂತೋಷ ನಿಸಾದ್ (23), ಓಂಪ್ರಕಾಶ ರಾಜಬೀರ್ (34), ರಮೇಶ್ ರಾಜಬೀರ್ (35) ಸೇರಿದಂತೆ ಒಟ್ಟು 11 ಮಂದಿ ಎಂದು ಗುರುತಿಸಲಾಗಿದೆ.
ಫೆಬ್ರವರಿ 10 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಂಡ್ಲೂರು ಬ್ರಿಡ್ಜ್ ಕೆಳಭಾಗದಲ್ಲಿ ದೋಣಿಗಳಲ್ಲಿ ಅಕ್ರಮವಾಗಿ ಮರಳು ತುಂಬಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ವೃತ್ತದ ಪೊಲೀಸ್ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ನದಿಯಲ್ಲಿ ದೋಣಿಗಳಲ್ಲಿ ಮರಳು ತುಂಬುತ್ತಿದ್ದವರು ಪೊಲೀಸರನ್ನು ಕಂಡು ಪೊದೆಯೊಳಗೆ ದೋಣಿಗಳನ್ನು ನಿಲ್ಲಿಸಿ ಅಡಗಿಕೊಂಡರು.
ನಂತರ ಸಿಬ್ಬಂದಿಗಳ ಸಹಾಯದಿಂದ ಹಳ್ನಾಡು ಕೆಆರ್ಐಡಿಎಲ್ ಮರಳು ಧಕ್ಕೆಯಿಂದ ದೋಣಿಗಳ ಮೂಲಕ ಸ್ಥಳಕ್ಕೆ ತೆರಳಿ, ಮರಳು ತುಂಬಿದ್ದ ನಾಲ್ಕು ದೋಣಿಗಳನ್ನು ಹಾಗೂ ಅದರಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ನದಿತೀರಕ್ಕೆ ಕರೆತಂದು ಪರಿಶೀಲನೆ ನಡೆಸಲಾಯಿತು.
ಬಂಧಿತ ಆರೋಪಿಗಳು ಹಳ್ನಾಡು ಕೆಆರ್ಐಡಿಎಲ್ ಮರಳು ಧಕ್ಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದು, ಧಕ್ಕೆಯ ಮಾಲೀಕ ಸುನಿಲ್ ಶೆಟ್ಟಿ ಹಾಗೂ ಸೂಪರ್ ವೈಸರ್ ಅಜ್ಮಲ್ ಅವರು ಉತ್ತಮ ಮರಳು ತಂದುಕೊಟ್ಟಲ್ಲಿ ಹೆಚ್ಚಿನ ಹಣ ನೀಡುವುದಾಗಿ ಪ್ರೇರೇಪಿಸಿದ್ದರಿಂದ ಜಿಯೋ ಫೆನ್ಸಿಂಗ್ ಗಡಿ ಮೀರಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು 4 ದೋಣಿಗಳು (ಪ್ರತಿ ದೋಣಿಯ ಅಂದಾಜು ಮೌಲ್ಯ ರೂ.75,000), ಸುಮಾರು 3½ ಯುನಿಟ್ ಮರಳು (ಅಂದಾಜು ಮೌಲ್ಯ ರೂ.4,500) ಹಾಗೂ 4 ಬಿದಿರಿನ ತೊಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026ರ ಅಡಿಯಲ್ಲಿ BNS, MMDR Act ಹಾಗೂ ಕರ್ನಾಟಕ ಕಿರಿಯ ಖನಿಜ ನಿಯಮಾವಳಿ ಕಾಯ್ದೆಯ ವಿವಿಧ ಕಲಂಗಳಂತೆ ಪ್ರಕರಣ ದಾಖಲಿಸಲಾಗಿದ್ದು, ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













