ಹೆಜಮಾಡಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರು ಆರೋಪಿಗಳ ಬಂಧನ

Spread the love

ಹೆಜಮಾಡಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರು ಆರೋಪಿಗಳ ಬಂಧನ

₹22.35 ಲಕ್ಷ ಮೌಲ್ಯದ ಸೊತ್ತು ವಶಕ್ಕೆ

ಕಾಪು: ಗೋವಾ ರಾಜ್ಯದಿಂದ ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಕಾಪು ಪೊಲೀಸರು ನ.11ರಂದು ಹೆಜಮಾಡಿ ಟೋಲ್ ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮದ್ಯ ಸಾಗಾಟಕ್ಕೆ ಬಳಸಿದ್ದ ವಾಹನ ಹಾಗೂ ಅದಕ್ಕೆ ಬೆಂಗಾವಲಾಗಿ ಸಾಗುತ್ತಿದ್ದ ಮತ್ತೊಂದು ವಾಹನ ಸೇರಿದಂತೆ ಒಟ್ಟು ₹22.35 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾರವಾರದ ಕಿನ್ನಾರ ಗ್ರಾಮದ ವಿನಯ್ (47), ಕಾರವಾರ ತಾಲೂಕು ನಂದಗಡದ ಗಜಾನನ ಮಹಾಬಲೇಶ್ವರ ನಾಯ್ಕ್ (45), ಕಾರವಾರದ ಆಮದಹಳ್ಳಿಯ ಸುಜಿತ್ ತಾಳಕೆರೆ (25) ಹಾಗೂ ಕಾರವಾರದ ಶಿರವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ.

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಜಿ. ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ನ.11ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಗೋವಾದಿಂದ ಮಂಗಳೂರಿಗೆ ಪರವಾನಗಿ ಇಲ್ಲದೆ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ವಾಹನ ಹಾಗೂ ಅದಕ್ಕೆ ಬೆಂಗಾವಲಾಗಿ ತೆರಳುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ವಿವರ:
– ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳು – ಅಂದಾಜು ಮೌಲ್ಯ ₹14.35 ಲಕ್ಷ.
– ಮಹೀಂದ್ರಾ ಪಿಕ್ಅಪ್ ಇನ್ಸುಲೇಟರ್ ವಾಹನ – ಅಂದಾಜು ಮೌಲ್ಯ ₹5 ಲಕ್ಷ.
– ಮಾರುತಿ ಸ್ವಿಫ್ಟ್ ಕಾರು – ಅಂದಾಜು ಮೌಲ್ಯ ₹3 ಲಕ್ಷ.
ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ₹22.35 ಲಕ್ಷ ಎಂದು ಅಂದಾಜಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಸದಾನಂದ ನಾಯ್ಕ್ ಅವರ ನಿರ್ದೇಶನದಂತೆ, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಜಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಶಕ್ತಿ ವೇಲು, ತನಿಖಾ ವಿಭಾಗದ ಪಿಎಸ್ಐ ಅನಿಲ್ಕುಮಾರ್ ಟಿ. ನಾಯ್ಕ್, ಅಪರಾಧ ಪತ್ತೆ ತಂಡದ ಎಎಸ್ಐಗಳಾದ ರಾಜೇಶ್ ಹಾಗೂ ಗಿರೀಶ್, ಹೆಡ್ ಕಾನ್ಸ್ಟೆಬಲ್ಗಳಾದ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳ, ಶಿವಾನಂದ ಪೂಜಾರಿ, ಅಶ್ವಿನ್ ಕುಮಾರ್ ಹಾಗೂ ಕಾನ್ಸ್ಟೆಬಲ್ಗಳಾದ ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಷ್ಮಿಣಿ ಮತ್ತು ಸಿಡಿಆರ್ ವಿಭಾಗದ ದಿನೇಶ್ ಸೇರಿದಂತೆ ಹಲವು ಸಿಬ್ಬಂದಿ ಭಾಗವಹಿಸಿದ್ದರು.


Spread the love
Subscribe
Notify of

0 Comments