ಕಾಪುವಿನಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಬಡ ಮಹಿಳೆಯರಿಗೆ ಪ್ರೋತ್ಸಾಹಧನ, ದಿನಬಳಕೆಯ ವಸ್ತುಗಳ ವಿತರಣೆ
- ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೆ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 109ನೇ ಜನ್ಮದಿನಾಚರಣೆಯನ್ನು ನ. 19ರಂದು ಕಾಪುವಿನ ರಾಜೀವ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ್ ಶೆಟ್ಟಿ ಮಾತನಾಡಿ, ಇಂದಿರಾ ಗಾಂಧಿಯವರ ರಾಜಕೀಯ ಜೀವನ, ದಿಟ್ಟ ನಾಯಕತ್ವ ಹಾಗೂ ದೇಶದ ಅಭಿವೃದ್ಧಿಗಾಗಿ ಅವರು ಕೈಗೊಂಡ ಕ್ರಾಂತಿಕಾರಿ ನಿರ್ಣಯಗಳನ್ನು ಸ್ಮರಿಸಿದರು.
ಉಳುವವನೇ ಹೊಲದೊಡೆಯ, ವಸತಿ ಭಾಗ್ಯ, ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಮೂಲಕ ದೇಶದ ಆರ್ಥಿಕತೆಗೆ ಬಲ ತುಂಬಿದ ಇಂದಿರಾ ಗಾಂಧಿ, ಬಾಂಗ್ಲಾದೇಶ ವಿಮೋಚನೆಯಂತಹ ಮಹತ್ವದ ಅಂತಾರಾಷ್ಟ್ರೀಯ ಸಾಧನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ವಿಶ್ವ ನಾಯಕಿಯಾಗಿದ್ದರು ಎಂದು ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಗೀತಾ ವಾಗ್ಳೆ ಮತ್ತು ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ದೇಶಕ್ಕಾಗಿ ಇಂದಿರಾ ಗಾಂಧಿಯವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಂಗವಾಗಿ ಬಡ ಮಹಿಳೆಯರಿಗೆ ಪ್ರೋತ್ಸಾಹಧನ ಹಾಗೂ ದಿನಬಳಕೆಯ ವಸ್ತುಗಳನ್ನು ವಿತರಿಸಿ ಗೌರವಿಸಲಾಯಿತು. ಹಲವು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಸಿಕೊಂಡು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಟಪಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಕ್ಷಣಾಪುರ ಜವನೆರ್ ವೇದಿಕೆಯ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಿಯಾಝ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್, ಕಾಪು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಎ. ಕೋಟ್ಯಾನ್, ಪುರಸಭಾ ಸದಸ್ಯರಾದ ಫರ್ಜಾನ ಸಂಜಯ್, ಶೋಭಾ ಎ. ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ ಆನಂದ್, ಮೊಹಮ್ಮದ್ ಆಸೀಫ್, ಸತೀಶ್ ಚಂದ್ರ ಮೂಳೂರು, ಬಬ್ಬಣ್ಣ ನಾಯಕ್ ಕಾಪು ಸೇರಿದಂತೆ ಕೆ.ಎಚ್. ಉಸ್ಮಾನ್, ನಯೀಮ್ ಕಟಪಾಡಿ, ಅಶ್ವಿನಿ ನವೀನ್ ಬಂಗೇರ, ಮಹೇಶ್ ಪೂಜಾರಿ ಕಟಪಾಡಿ, ಅಶೋಕ್ ನಾಯರಿ, ಹಮೀದ್ ಯೂಸುಫ್, ಐತಪ್ಪ ಕೋಟ್ಯಾನ್, ಪ್ರಭಾಕರ್ ಆಚಾರ್ಯ, ಸುನಂದಾ ಪಡುಬಿದ್ರಿ, ಸದಾನಂದ ಸುವರ್ಣ, ಆಶಾ ಶಂಕರ್ ಮತ್ತಿತರ ಮುಖಂಡರು, ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಸುಚರಿತಾ ಲಕ್ಷ್ಮಣ್ ವಂದಿಸಿದರು.













