ಕೋಟ: ಪಡಿತರ ಅಕ್ಕಿ ಚೀಲ ವಿಚಾರದಲ್ಲಿ ಬೆದರಿಕೆ ಆರೋಪ: ನಾಗೇಂದ್ರ ಪುತ್ರನ್ ಸಹಿತ ಮೂವರ ಬಂಧನ

Spread the love

ಕೋಟ: ಪಡಿತರ ಅಕ್ಕಿ ಚೀಲ ವಿಚಾರದಲ್ಲಿ ಬೆದರಿಕೆ ಆರೋಪ: ನಾಗೇಂದ್ರ ಪುತ್ರನ್ ಸಹಿತ ಮೂವರ ಬಂಧನ

ಉಡುಪಿ: ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ನಾಗೇಂದ್ರ ಪುತ್ರನ್ ಅಲಿಯಾಸ್ ನಾಗೇಂದ್ರ ಕೆ.ಕೆ. (37), ಪಿ. ಸುಮಂತ್ ಕುಂದರ್ (40) ಹಾಗೂ ಸಚಿನ್ ಶ್ರೀಯಾನ್ (32) ಎಂದು ಗುರುತಿಸಲಾಗಿದೆ.

ಆಗಸ್ಟ್ 31ರಂದು ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್., ಪಿಎಸ್ಐ (ಕಾ.ಸು.), ಮಹಾಂತೇಶ ಜಾಬಗೌಡ, ಪಿಎಸ್ಐ (ತನಿಖೆ) ಹಾಗೂ ಸಿಬ್ಬಂದಿ ವಿಜಯೇಂದ್ರ, ಶರತ್ ಮತ್ತು ಶಿವರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ನಾಗೇಂದ್ರ ಪುತ್ರನ್ ಅಲಿಯಾಸ್ ನಾಗೇಂದ್ರ ಕೆ.ಕೆ. ಮತ್ತು ಪಿ. ಸುಮಂತ್ ಕುಂದರ್ ಅವರನ್ನು ಸೆ. 2ರಂದು ಮೈಸೂರು ಪ್ಯಾಲೇಸ್ ಎದುರಿನ ವಸ್ತು ಪ್ರದರ್ಶನ ಮೈದಾನದ ಬಳಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇನ್ನು ಪ್ರಕರಣದ ಮತ್ತೊಬ್ಬ ಆರೋಪಿ ಸಚಿನ್ ಶ್ರೀಯಾನ್ ಅವರನ್ನು ಸೆ. 1ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.


Spread the love
Subscribe
Notify of

0 Comments