ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿ ಸಿಕ್ಕಿತು ಜೀವದಾನ!
ಮಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕುಮಾರಧಾರ ನದಿಗೆ ಹಾರಿದ ಮಹಿಳೆಯೊಬ್ಬರಿಗೆ ಮೊಸಳೆ ಕಚ್ಚಿದ ಪರಿಣಾಮ, ಆಕೆ ಜೀವ ಭಯದಿಂದ ಚೀರಿ ಬದುಕಿ ಬಂದ ವಿಚಿತ್ರ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನವೆಂಬರ್ 4 ರ ತಡರಾತ್ರಿ ಸಂಭವಿಸಿದೆ. ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ನವೆಂಬರ್ 4 ರ ತಡರಾತ್ರಿ ಕುಮಾರಧಾರಾ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ್ದರು.
ಮಹಿಳೆ ನದಿಯ ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಆಕೆಗೆ ಕಚ್ಚಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರೂ, ಮೊಸಳೆ ದಾಳಿ ನಡೆಸುತ್ತಿದ್ದಂತೆ ತೀವ್ರ ಭೀತಿ ಹಾಗೂ ನೋವಿನಿಂದ ಮಹಿಳೆ ನದಿಯ ಮಧ್ಯದಲ್ಲೇ ಗಟ್ಟಿಯಾಗಿ ಬೊಬ್ಬೆ ಹೊಡೆದು ಚೀರಲು ಆರಂಭಿಸಿದ್ದಾರೆ. ಈ ವೇಳೆ ಸೇತುವೆಯ ಪಕ್ಕದಲ್ಲಿದ್ದ ವಸತಿ ಗೃಹದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಹಿಳೆಯ ಆಕ್ರಂದನ ಕೇಳಿ ತಕ್ಷಣವೇ ಟಾರ್ಚ್ ಬೆಳಕಿನೊಂದಿಗೆ ನದಿ ದಂಡೆಗೆ ಧಾವಿಸಿದ್ದಾರೆ.
ಮಹಿಳೆ ನಿರಂತರವಾಗಿ ಚೀರಿ ಬೊಬ್ಬೆ ಹೊಡೆದಿದ್ದರಿಂದ ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಿದ್ದರಿಂದ ಗಾಬರಿಗೊಂಡ ಮೊಸಳೆ ಮಹಿಳೆಯನ್ನು ಬಿಟ್ಟು ನೀರಿನಲ್ಲಿ ಈಜಿಕೊಂಡು ಕಾಲ್ಕಿತ್ತಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರಗೆ ತೆಗೆದು ದಂಡೆಗೆ ಕರೆತಂದಿದ್ದಾರೆ. ಸಾಮಾನ್ಯವಾಗಿ ನೀರಿಗೆ ಹಾರಿದರೆ ಮುಳುಗಿ ಪ್ರಾಣ ಹೋಗುತ್ತಿತ್ತು, ಆದರೆ ಇಲ್ಲಿ ಮೊಸಳೆ ಕಚ್ಚಿದ್ದರಿಂದಲೇ ಮಹಿಳೆ ಭಯದಿಂದ ಚೀರಿ ಸ್ಥಳೀಯರ ಗಮನ ಸೆಳೆಯುವಂತಾಯಿತು. ಹೀಗಾಗಿ ‘ಮೊಸಳೆ ಕಡಿತವೇ ಆಕೆಯ ಜೀವ ಉಳಿಸಿತು’ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ತಕ್ಷಣವೇ ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಕೌಟುಂಬಿಕ ಸಣ್ಣಪುಟ್ಟ ಮನಸ್ತಾಪಗಳಿಂದ ಬೇಸತ್ತು ಜೀವ ಕಳೆದುಕೊಳ್ಳಲು ಉಡುಪಿಯಿಂದ ಕುಕ್ಕೆಗೆ ಬಂದು ನದಿಗೆ ಹಾರಿದ್ದಾಗಿ ತಿಳಿಸಿದ್ದಾರೆ. ಬಳಿಕ ಉಡುಪಿಯಲ್ಲಿದ್ದ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸುಬ್ರಹ್ಮಣ್ಯಕ್ಕೆ ಕರೆಸಿದ ಪೊಲೀಸರು, ಅವರಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಿ ಮಹಿಳೆಯನ್ನು ಕುಟುಂಬಸ್ಥರ ಜೊತೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.













