ಕುಂದಾಪುರ: ವಿಶೇಷ ಚೇತನ ಮಗಳನ್ನು ಕೊಂದು ಆತ್ಮಹತ್ಯೆಗೈದ ತಾಯಿ
ಕುಂದಾಪುರ: ವಿಶೇಷ ಚೇತನ ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಬಳಿಕ ತಾಯಿ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.
ಶಾನಾಡಿ ಕೊರಗ ಕಾಲನಿ ನಿವಾಸಿ ಸುಧಾಕರ ಕೊರಗ ಅವರ ಪುತ್ರಿ ಸುಪ್ರತಿ (14) ವಿಶೇಷ ಚೇತನೆಯಾಗಿದ್ದು ಅವರನ್ನು ಕೊಂದ ಪತ್ನಿ ನೇತ್ರಾವತಿ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಸುಪ್ರತಿ ಹುಟ್ಟಿನಿಂದಲೇ ಅಂಗವಿಕಲೆಯಾಗಿದ್ದು, ನಡೆಯಲು ಅಥವಾ ಕುಳಿತುಕೊಳ್ಳಲು, ಮಾತನಾಡಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದಳು. ಮಗಳ ಆರೈಕೆಯನ್ನು ತಾಯಿ ನೇತ್ರಾವತಿ ಮಾಡುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ.
ರವಿವಾರ ಬೆಳಗ್ಗೆ ಸುಧಾಕರ ಅವರು ಕೆಲಸಕ್ಕೆ ತೆರಳಿದ ಬಳಿಕ ನೇತ್ರಾವತಿ ಮನೆಯ ಕೆಲಸಗಳನ್ನು ಮುಗಿಸಿ ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಬ್ರಹ್ಮಾವರ ವೃತ್ತನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













