ಪ್ರವಾದಿ ಮುಹಮ್ಮದ್ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಯು.ಟಿ. ಖಾದರ್
ಮಂಗಳೂರು: ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನವಾದ ಮೀಲಾದುನ್ನಬಿಯನ್ನು ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಂದೇಶ ಸಾರುವ ದಿನವನ್ನಾಗಿ ಆಚರಿಸೋಣ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕರೆ ನೀಡಿದ್ದಾರೆ.
ಮೀಲಾದುನ್ನಬಿ ಅಂಗವಾಗಿ ಸಮಸ್ತ ಕನ್ನಡಿಗರಿಗೆ ಶುಭಾಶಯ ಕೋರಿರುವ ಅವರು, ಪ್ರವಾದಿ ಮುಹಮ್ಮದ್ (ಸ.ಅ) ಅವರ ಬದುಕಿನ ಮಹತ್ವದ ಮೌಲ್ಯಗಳಾದ ಕರುಣೆ, ಸಂಯಮ, ಶಿಸ್ತು, ನೆರೆಯವರ ಹಕ್ಕಿನ ಗೌರವ, ದುರ್ಬಲರ ಕಾಳಜಿ ಹಾಗೂ ಸಮಾಜಕ್ಕೆ ಒಳಿತು ಮಾಡುವ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರವಾದಿ (ಸ.ಅ) ಅವರನ್ನು ಗೌರವಿಸುವ ಅತ್ಯುತ್ತಮ ಮಾರ್ಗ ಅವರ ಬೋಧಿಸಿದ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ಪಾಲಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೀಲಾದುನ್ನಬಿ ಆಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಹಾಗೂ ವಿದ್ಯಾರ್ಥಿಗಳ ಓದು ಮತ್ತು ವೃದ್ಧರ ವಿಶ್ರಾಂತಿಗೆ ಭಂಗವಾಗದಂತೆ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಯು.ಟಿ. ಖಾದರ್ ಮನವಿ ಮಾಡಿದ್ದಾರೆ.
ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನ ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುವ ಮೂಲಕ ಪ್ರೀತಿ, ಸಾಮರಸ್ಯ ಮತ್ತು ಭ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ನೆಮ್ಮದಿಯ ನಾಡು, ಸೌಹಾರ್ದಯುತ ಕರ್ನಾಟಕ ಹಾಗೂ ಬಲಿಷ್ಠ ದೇಶ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ಯು.ಟಿ. ಖಾದರ್ ಆಶಯ ವ್ಯಕ್ತಪಡಿಸಿದ್ದಾರೆ.













