ಸರ್ಕಾರದ ಅನುದಾನ ಸದ್ವಿನಿಯೋಗ ಮಾಡಿಕೊಂಡು ಸ್ವಾವಲಂಬಿಗಳಾಗಿ: ವಿಜಯಕುಮಾರ್ ಕರೆ
ಕಾಪು: ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಸರ್ಕಾರದ ಅನುದಾನ ಹಾಗೂ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದಾಗಬೇಕು ಎಂದು ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಕರೆ ನೀಡಿದರು.
ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾಪು ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕ ಕಂಪನಿ (ನಿ.)ಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂಪನಿಯ ಅಧ್ಯಕ್ಷೆ ಉಷಾ ದಯಾನಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕಂಪನಿಯ ಕಾರ್ಯನಿರ್ವಹಣಾಧಿಕಾರಿ ರೀನಾ ಹೆಗ್ಡೆ ಅವರು ಸಂಸ್ಥೆಯ ಹಿಂದಿನ ಸಾಲಿನ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ವಾರ್ಷಿಕ ಆಯವ್ಯಯದ ಪಟ್ಟಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು.
ಬ್ರಹ್ಮಾವರದ ರುಡ್‌ಸೆಟ್ ತರಬೇತಿ ಸಂಸ್ಥೆಯ ಡಾ. ಬೊಮ್ಮಯ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಎನ್‌ಆರ್‌ಎಲ್‌ಎಂನ ಸಹಾಯಕ ಪ್ರಬಂಧಕಿ ಡಾ. ಸೌಮ್ಯಾ ಕುಮಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಂಪನಿಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಎನ್‌ಆರ್‌ಎಲ್‌ಎಂನ ಕಾಪು ತಾಲೂಕು ಸಂಯೋಜಕಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಂಪನಿಯ ನಿರ್ದೇಶಕಿ ಗೀತಾ ವಾಗ್ಳೆ, ಬಂಟಕಲ್ಲು ಅವರು ಸ್ವಾಗತಿಸಿದರು. ಶಾರದೇಶ್ವರಿ ವಂದಿಸಿದರು. ನಿರ್ದೇಶಕಿ ಪವಿತ್ರಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಶಿರ್ವ ಹಾಗೂ ಪುಷ್ಪಲತಾ ಪ್ರಾರ್ಥಿಸಿದರು.
ಕಂಪನಿಯ ನಿರ್ದೇಶಕರಾದ ಕವಿತಾ ಹಿತೇಂದ್ರ, ಮಮತಾ ವಾಗ್ಳೆ, ಕಸ್ತೂರಿ, ರೇಖಾ ಚಂದ್ರಶೇಖರ್, ಶರ್ಮಿಳಾ ಹಾಗೂ ಶಕುಂತಳಾ ಸೇರಿದಂತೆ ಕಂಪನಿಯ ಷೇರುದಾರ ಸದಸ್ಯರು ಮತ್ತು ಎನ್‌ಆರ್‌ಎಲ್‌ಎಂನ ಕಾಪು ತಾಲೂಕು ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಂಪನಿಯ ವಿವಿಧ ಉತ್ಪಾದನಾ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.













