ಮಂಗಳೂರು – ಬೆಂಗಳೂರು: ವಂದೇ ಭಾರತ್ ಬಂದರೂ ಎರಡೇ ತಾಸು ಉಳಿತಾಯ!  

Spread the love

ಮಂಗಳೂರು – ಬೆಂಗಳೂರು: ವಂದೇ ಭಾರತ್ ಬಂದರೂ ಎರಡೇ ತಾಸು ಉಳಿತಾಯ!  

ಮಂಗಳೂರು: ಪ್ರಸ್ತಾವಿತ ವಂದೇ ಭಾರತ್ ರೈಲಿನಿಂದ ಮಂಗಳೂರು – ಬೆಂಗಳೂರು ನಡುವಿನ ಪ್ರಯಾಣದ ಸಮಯ ಇತರ ಎಕ್ಸ್ ಪ್ರಸ್ ರೈಲುಗಳಿಗೆ ಹೋಲಿಸಿದರೆ 2ರಿಂದ 3 ತಾಸು ಮಾತ್ರ ಉಳಿತಾಯವಾಗಲಿದೆ.

ಮಂಗಳೂರು-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಂದೇ ಭಾರತ್ ಓಡಿಸಲು ರೈಲ್ವೇ ಇಲಾಖೆ ಉತ್ಸುಕತೆ ತೋರಿಸಿದೆ. ಆದರೆ ಈ ಮಾರ್ಗದ ಹಳಿಗಳ ಸಾಮರ್ಥ್ಯ ಮತ್ತು ಘಟ್ಟ ಪ್ರದೇಶದ ಭೌಗೋಳಿಕ ಸವಾಲುಗಳಿಂದಾಗಿ ಇಲ್ಲಿ ಓಡುವ ವಂದೇ ಭಾರತ್ ರೈಲು ಇತರ ವಂದೇ ಭಾರತ್ ರೈಲುಗಳಿಗಿಂತ ಕಡಿಮೆ ವೇಗದಲ್ಲಿ ಸಂಚರಿಸಲಿದೆ ಎಂಬುದು ಕೆಲವು ತಜ್ಞರ ಲೆಕ್ಕಾಚಾರ.

ವಂದೇ ಭಾರತ್‌ ಆರಂಭವಾದರೆ 4 ತಾಸುಗಳಲ್ಲಿ ಮಂಗಳೂರು ಬೆಂಗಳೂರು ತಲುಪಬಹುದು ಎಂಬುದು ಕೆಲವರ ಅಂದಾಜು. ಆದರೆ ಇದು ಸದ್ಯಕ್ಕಂತೂ ಸಾಧ್ಯವಿಲ್ಲ. ಕನಿಷ್ಠ 7 ತಾಸು ಬೇಕೇ ಬೇಕು ಎನ್ನುತ್ತಾರೆ ತಜ್ಞರು. ಮಂಗಳೂರಿನಿಂದ ಬೆಂಗಳೂರು ತಲುಪಲು ಇತರ ಎಕ್ಸ್‌ಪ್ರೆಸ್‌ ರೈಲುಗಳು 9 ರಿಂದ 10 ತಾಸುಗಳನ್ನು ತೆಗೆದುಕೊಳ್ಳುತ್ತಿವೆ. ಮಂಗಳೂರು-ತಿರುವನಂತಪುರ, ಮಂಗಳೂರು- ಮಡಗಾಂವ್ ವಂದೇಭಾರತ್ ರೈಲುಗಳು 110 ಕಿ.ಮೀ. ವೇಗದಲ್ಲಿ ಮತ್ತು ಚೆನ್ನೈ – ಕೊಯಮತ್ತೂರು ವಂದೇ ಭಾರತ್ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಆದರೆ ಅದೇ ವೇಗದಲ್ಲಿ ಬೆಂಗಳೂರು-ಮಂಗಳೂರು ವಂದೇಭಾರತ್ ಸಂಚರಿಸದು ಎಂಬ ಅಭಿಪ್ರಾಯವಿದೆ.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಮಧ್ಯೆ 55 ಕಿ.ಮೀ. ಅತ್ಯಂತ ಕಡಿದಾದ ಘಟ್ಟ ಪ್ರದೇಶವಿದೆ. ಇಲ್ಲಿ ಸುರಕ್ಷೆಯ ದೃಷ್ಟಿಯಿಂದ ರೈಲುಗಳು ಗಂಟೆಗೆ ಗರಿಷ್ಠ 30 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಲು ಸಾಧ್ಯ. ಇದು ಒಟ್ಟಾರೆ ಸರಾಸರಿ ವೇಗವನ್ನು ಕಡಿಮೆ ಮಾಡುತ್ತದೆ. ಬೆಂಗಳೂರಿನಿಂದ ಸಕಲೇಶಪುರದವರೆಗೆ ಮತ್ತು ಸುಬ್ರಹ್ಮಣ್ಯದಿಂದ ಮಂಗಳೂರಿನವರೆಗೆ ಹಳಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಗಂಟೆಗೆ 80ರಿಂದ 110 ಕಿ.ಮೀ. ವೇಗದಲ್ಲಿ ಚಲಿಸಬಹುದು. ಉಳಿದ ಹಾದಿಯನ್ನು 30 ಕಿ.ಮೀ. ವೇಗದಲ್ಲೇ ಚಲಿಸಬೇಕು. ಆಗ ಒಟ್ಟಾರೆ ಪ್ರಯಾಣದಲ್ಲಿ ರೈಲಿನ ಸರಾಸರಿ ವೇಗ ಗಂಟೆಗೆ ಸುಮಾರು 50ರಿಂದ 55 ಕಿ.ಮೀ. ಇರುತ್ತದೆ.

ಬೆಂಗಳೂರಿನಿಂದ ಮಂಗಳೂರಿಗೆ ರೈಲು ಮಾರ್ಗದ ದೂರ ಸುಮಾರು 360 – 380ಕಿ.ಮೀ. ಇದೆ. ಈ ದೂರವನ್ನು ಕ್ರಮಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸುಮಾರು ಏಳೂ ಕಾಲು ಅಥವಾ ಏಳೂವರೆ ಗಂಟೆ ತಗಲಬಹುದು. ಒಂದು ವೇಳೆ ಇದಕ್ಕಿಂತ ಕಡಿಮೆ ಅವಧಿಯಲ್ಲಿ ತಲುಪ ಬೇಕಾದರೆ ಬೆಂಗಳೂರು-ಹಾಸನ ಹಳಿ ದ್ವಿಪಥಗೊಂಡು 130 ಕಿ.ಮೀ ವೇಗದಲ್ಲಿ ಸಂಚರಿಸಬೇಕು. ಹಾಸನ -ಸಕಲೇಶಪುರ- ಸುಬ್ರಹ್ಮಣ್ಯ-ಮಂಗಳೂರು ಮಾರ್ಗವೂ ದ್ವಿಪಥಗೊಂಡು ಕನಿಷ್ಠ 110 ಕಿ.ಮೀ. ವೇಗದಲ್ಲಿ ಚಲಿಸುವಂತಾಗಬೇಕು.

ಮಂಗಳೂರು ಸೆಂಟ್ರಲ್ ಮತ್ತು ಯಶವಂತಪುರ ಜಂಕ್ಷನ್‌ನಿಂದ ಏಕಕಾಲಕ್ಕೆ ಎರಡು ವಂದೇ ಭಾರತ್ ಆರಂಭಿಸಿದರೆ (ಬೆಳಗ್ಗೆ 6.25ಕ್ಕೆ) ಈ ಮಾರ್ಗದಲ್ಲಿ ಕೆಲವು ರೈಲುಗಳ ಕ್ರಾಸಿಂಗ್ ತಪ್ಪಿಸಬಹುದು. ಇದರಿಂದ ಒಂದಷ್ಟು ಸಮಯ ಉಳಿತಾಯವಾಗಬಹುದು ಎಂಬುದು ಕೆಲವು ಪರಿಣತರ ಅಭಿಪ್ರಾಯ. ಅಧಿಕಾರಿಗಳ ಪ್ರಕಾರವೂ, ಘಾಟಿ ಪ್ರದೇಶ ಇರುವ ಕಾರಣ ಉಳಿದ ಪ್ರದೇಶಗಳಲ್ಲಿ ಚಲಿಸಿದ ವೇಗದಲ್ಲಿ ಚಲಿಸುವುದು ಕಷ್ಟ ಎಂಬ ಅಭಿಪ್ರಾಯವಿದೆ.


Spread the love
Subscribe
Notify of

0 Comments
Inline Feedbacks
View all comments