ಮಂಗಳೂರು: ಮಧ್ಯರಾತ್ರಿ ಸಮುದ್ರದಲ್ಲಿ ಮೀನುಗಾರನ ಜೀವ ಉಳಿಸಿದ ಕೋಸ್ಟ್ ಗಾರ್ಡ್
ಮಂಗಳೂರು: ಕತ್ತಲು, ಮೌನ ಆವರಿಸಿದ್ದ ಮಧ್ಯರಾತ್ರಿಯಲ್ಲಿ ಸಮುದ್ರ ತನ್ನ ಅತಿದೊಡ್ಡ ಸವಾಲು ಒಡ್ಡುವಾಗ, ಭಾರತೀಯ ಕರಾವಳಿ ಕಾವಲು ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಮತ್ತೊಮ್ಮೆ ತನ್ನ ‘ಸಮುದ್ರದಲ್ಲಿ ಜೀವಗಳ ರಕ್ಷಣೆ’ ಎಂಬ ಧೈಯವನ್ನು ಸಾಬೀತುಪಡಿಸಿದೆ.
ನವೆಂಬರ್ 1, 2026 ರಂದು ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲು (100 ಕಿ.ಮೀ.) ದೂರದಲ್ಲಿ ಕಾರ್ಯಾಚರಣೆಯಲ್ಲಿದ್ದ ಮೀನುಗಾರಿಕಾ ದೋಣಿ IFB ಶಿವ ಸಾಗರ್ ನಿಂದ VHF ಮೂಲಕ ತುರ್ತು ಕರೆ ಬಂದಿದೆ. ಮೀನುಗಾರಿಕಾ ಬಲೆ ಎಳೆಯುವಾಗ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದಿದ್ದು, ನಂತರ ದೋಣಿಯವರೇ ಅವರನ್ನು ಮೇಲಕ್ಕೆತ್ತಿದ್ದರು. ಆದರೆ ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು.
ತುರ್ತು ಕರೆ ಸ್ವೀಕರಿಸಿದ ತಕ್ಷಣ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರ-3 (CGDHQ-3) ಅತ್ಯಂತ ಕಾರ್ಯತತ್ಪರತೆಯಿಂದ ಪ್ರತಿಕ್ರಿಯಿಸಿತು. ತಕ್ಷಣವೇ ICGS C-448 ದೋಣಿಯನ್ನು ನಿಯೋಜಿಸಲಾಯಿತು. ರಾತ್ರಿಯ ಕತ್ತಲಲ್ಲಿಯೇ ಮೀನುಗಾರಿಕಾ ದೋಣಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಯಿತು.
ದಿಕ್ಕು ತೋಚದೆ ಬಳಲಿದ್ದ ಮೀನುಗಾರನನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ನವ ಮಂಗಳೂರು ಬಂದರು (NMPA) ಜೆಟ್ಟಿಗೆ ಕರೆತರಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.













