ಮಂಗಳೂರು ದಸರಾ ಭಕ್ತ ವೈಭವದ ಪ್ರತೀಕ: ಸಿಎಂ ಡಿ ಕೆ ಶಿವಕುಮಾರ್
ಮಂಗಳೂರು: “ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ದಸರಾ ಭಕ್ತವೈಭವದ ಪ್ರತೀಕ. ದಸರಾ ಕೇವಲ ಆಚರಣೆಯಲ್ಲ; ಅದು ನಮ್ಮ ಪರಂಪರೆಯ ಹೆಮ್ಮೆ, ಆರ್ಥಿಕ ಚಟುವಟಿಕೆಗಳ ಚೈತನ್ಯ ಮತ್ತು ಸಮಾಜದ ಒಗ್ಗಟ್ಟಿನ ಸಂಕೇತ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಣ್ಣಿಸಿದರು.

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಮಂಗಳೂರು ದಸರಾ ಮಹೋತ್ಸವದಲ್ಲಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು. ಕರಾವಳಿಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಪ್ರಕೃತಿ ಮತ್ತು ಜನರ ಭಾವನೆಗಳನ್ನು ಗೌರವಿಸಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ” ಎಂದು ಹೇಳಿದರು.
“ಕರಾವಳಿಗೆ ಹೊಸ ರೂಪ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ನನ್ನದು ರಾಜಕಾರಣದ ಚಿಂತನೆಯಲ್ಲ, ಜನರ ಬದುಕಿನ ಚಿಂತನೆ. ಜನರ ಭಾವನೆಗಳು ಮತ್ತು ಅವರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದೇನೆ. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಸರಕಾರ ಸಂಕಲ್ಪ ಮಾಡಿದೆ” ಎಂದು ತಿಳಿಸಿದರು.
“ಕರಾವಳಿಯ ಹಿರಿಯರು ಈ ಪ್ರದೇಶಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಲ್ಲಿನ ದೈವಿಕ ಪರಂಪರೆ, ಪ್ರಕೃತಿ ಸಂಪತ್ತು ಮತ್ತು ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಕರಾವಳಿಯ ಜನರ ಸಂಸ್ಕಾರ, ಜ್ಞಾನ ಮತ್ತು ಶಿಸ್ತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅವರೊಂದಿಗೆ ಹೆಜ್ಜೆ ಹಾಕಲು ಬಂದಿದ್ದೇನೆ” ಎಂದರು.

“ಅಲೆಗಳಿಲ್ಲದೆ ಸಮುದ್ರವನ್ನು ಊಹಿಸಲು ಸಾಧ್ಯವಿಲ್ಲ. ಅದೇ ರೀತಿ ಕರಾವಳಿಯಿಲ್ಲದೆ ಕರ್ನಾಟಕವೂ ಪೂರ್ಣವಾಗದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶವನ್ನು ಸಂಸ್ಕೃತಿ ಮತ್ತು ಪರಂಪರೆಯ ವಿಶ್ವವಿದ್ಯಾಲಯವೆಂದೇ ಪರಿಗಣಿಸುತ್ತೇನೆ” ಎಂದು ಹೇಳಿದರು.
“ತುಳುನಾಡಿನ ಸ್ನೇಹಿತರು, ಶಾಸಕರು ಪಕ್ಷಭೇದ ಮರೆತು ಬಂದು ತಮ್ಮ ಭಾಷೆಗೆ ಗೌರವ ನೀಡುವಂತೆ ಮನವಿ ಮಾಡಿದ್ದರು. ಇದು ಕೇವಲ ಭಾಷೆಯ ವಿಚಾರವಲ್ಲ, ಜನರ ಭಾವನೆ, ಬದುಕು, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಿಷಯ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದು ಸಚಿವ ಸಂಪುಟ ಸಭೆ ನಡೆಸಿ ತುಳು ಭಾಷೆಗೆ ಗೌರವ ನೀಡುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇನೆ. ಇದರಿಂದ ನನಗೆ ಅಪಾರ ಸಂತೋಷವಾಗಿದೆ” ಎಂದು ಹೇಳಿದರು.
“ತಾಯಿಯಿಂದ ಕಲಿತ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾಷೆಯ ಗೌರವ ಕಾಪಾಡುವ ಮೂಲಕ ಸ್ಥಳೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು” ಎಂದರು.
“ಮಂಗಳೂರು ದಸರಾ ಸಂಭ್ರಮ, ಸೌಹಾರ್ದತೆ, ಸಂಸ್ಕೃತಿ ಮತ್ತು ಮಾನವೀಯತೆಯ ಸಂಗಮವಾಗಿದೆ. ದೇವಸ್ಥಾನಗಳಲ್ಲಿ ಪಕ್ಷಭೇದಗಳಿಗೆ ಅವಕಾಶವಿಲ್ಲ. ಎಲ್ಲರೂ ಒಂದಾಗಿ ಸೇರುವ ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತವೆ. ಪರಂಪರೆಯ ಜತೆಗೆ ಪ್ರಗತಿಯನ್ನೂ ಸಾಧಿಸಬೇಕು” ಎಂದು ಹೇಳಿದರು.

“ಮೈಸೂರಿನ ದಸರಾದಲ್ಲಿಯೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳಿಗೆ ಅವಕಾಶ ನೀಡಲಾಗುತ್ತಿದೆ. ಕಂಬಳ ಸೇರಿದಂತೆ ಕರಾವಳಿಯ ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಸೂರಿನಲ್ಲಿ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ” ಎಂದು ತಿಳಿಸಿದರು.
“ಕುದ್ರೋಳಿ ಕ್ಷೇತ್ರಕ್ಕೆ ಕೇವಲ ದಸರಾ ಉದ್ಘಾಟನೆಗಾಗಿ ಬಂದಿಲ್ಲ. ಭಕ್ತನಾಗಿಯೂ ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಉಡುಪಿಯಲ್ಲಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ಬಳಿಕ ಇಲ್ಲಿ ಗೋಕರ್ಣನಾಥ ಸ್ವಾಮಿ, ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ನಾರಾಯಣ ಗುರುಗಳ ಆಶೀರ್ವಾದ ಕೋರಿದ್ದೇನೆ” ಎಂದರು.
“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ನಾರಾಯಣ ಗುರುಗಳ ಮೂಲತತ್ವ. ಮಾನವೀಯತೆಯ ಆಧಾರದಲ್ಲಿ ಬದುಕಬೇಕು. ಪ್ರತಿಯೊಬ್ಬರೂ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು, ನೆಮ್ಮದಿ ಪಡೆಯಲು ಹಾಗೂ ಆಸೆ-ಆಕಾಂಕ್ಷೆಗಳನ್ನು ದೇವರ ಮುಂದಿಡಲು ದೇವಸ್ಥಾನಗಳಿಗೆ ಬರುತ್ತಾರೆ. ನಾನೂ ಇಂದು ನಿಮ್ಮ ನಡುವೆ ಭಕ್ತನಾಗಿ ಬಂದಿದ್ದೇನೆ” ಎಂದು ಹೇಳಿದರು.
“ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ಎಂದು ಚಾಮುಂಡೇಶ್ವರಿ ದೇವಾಲಯದಲ್ಲಿ ಹೇಳಿದ್ದೆ. ಈ ಹೇಳಿಕೆ ಕುರಿತು ಕೆಲವರು ಟೀಕೆ ಮತ್ತು ವ್ಯಂಗ್ಯ ಮಾಡಿದ್ದರೂ ಅದನ್ನು ಮುಂದುವರಿಸಿಕೊಂಡು ಹೋಗಲು ತಾವು ಬಯಸುವುದಿಲ್ಲ” ಎಂದರು.
“ಸಣ್ಣ ಸಣ್ಣ ನದಿಗಳು ಸಮುದ್ರವನ್ನು ಸೇರಿ ಸಾಗರವಾಗುವಂತೆ, ರಾಜ್ಯದ ವಿವಿಧ ದೇವಾಲಯಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದಿದ್ದೇನೆ. ಅದರ ಫಲವಾಗಿ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ” ಎಂದು ಹೇಳಿದರು.
“ಅಧಿಕಾರದ ಅವಧಿಯಲ್ಲಿ ಯಾರಿಗೂ ನೋವಾಗದಂತೆ ಪರಿಶುದ್ಧ ಆಡಳಿತ ನೀಡುವುದು, ಜನರ ಬದುಕಿನಲ್ಲಿ ಸಾಧ್ಯವಾದಷ್ಟು ಬದಲಾವಣೆ ತರುವುದು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವುದು ತಮ್ಮ ಕರ್ತವ್ಯವಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದರು.
ಕುದ್ರೋಳಿ ಕ್ಷೇತ್ರದ ವತಿಯಿಂದ ಮುಖ್ಯಮಂತ್ರಿ ಅವರಿಗೆ ಮೂರು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಯಿತು. ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ 15 ಎಕರೆ ಜಮೀನು ಮಂಜೂರು ಮಾಡಬೇಕು, ಮಂಗಳೂರು ದಸರಾ ಮಹೋತ್ಸವಕ್ಕೆ ರಾಜ್ಯ ಬಜೆಟ್ನಲ್ಲಿ ಶಾಶ್ವತ ಅನುದಾನ ಮೀಸಲಿಡಬೇಕು ಹಾಗೂ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಗೆ ಅಧಿಕೃತ ನಿರ್ದೇಶನ ನೀಡಬೇಕು ಎಂದು ಮನವಿಸಲ್ಲಿಸಲಾಯಿತು.
“ಈ ಕ್ಷೇತ್ರದವರು ನೀಡಿರುವ ಬೇಡಿಕೆಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ. ಬದುಕಿನಲ್ಲಿ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂಬುದೇ ನನ್ನ ಆಶಯ. ನನ್ನ ಮೇಲೆ ವಿಶ್ವಾಸವಿರಲಿ. ನಿಮ್ಮ ಚಿಂತನೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“1985ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೆ. ಬಳಿಕ ಜನಾರ್ದನ ಪೂಜಾರಿ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಕನಕಪುರದಲ್ಲಿ ಸಾಲಮೇಳ ನಡೆಸಿ ಬಡವರಿಗೆ ಸಾಲ ನೀಡಿದ್ದರು. ಅಂದು ಸುಮಾರು 5,000 ರೂ. ಸಾಲವೂ ದೊಡ್ಡ ಮೊತ್ತವಾಗಿತ್ತು. ನನ್ನ ಕ್ಷೇತ್ರದಲ್ಲಿ ಏಳರಿಂದ ಎಂಟು ಸಾವಿರ ಜನರಿಗೆ ನೆರವು ದೊರೆತಿತ್ತು. ಆ ನೆರವು ನನ್ನ ಮುಂದಿನ ರಾಜಕೀಯ ಬದುಕಿಗೆ ದೊಡ್ಡ ಶಕ್ತಿ ನೀಡಿತು. ಬಳಿಕ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕನಾಗಿ, ಸಚಿವನಾಗಿ ಬೆಳೆದು ಇಂದು ಈ ಸ್ಥಾನಕ್ಕೆ ಬರಲು ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದವೂ ಕಾರಣ” ಎಂದು ಹೇಳಿದರು.
“ನಾರಾಯಣ ಗುರುಗಳ ಸಂದೇಶ ಹಾಗೂ ಜನಾರ್ದನ ಪೂಜಾರಿ ಅವರ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಯುವಜನರಿಗೆ ಅವಕಾಶ ಕಲ್ಪಿಸುವುದು ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಬೆಳೆಸುವುದು ಮುಖ್ಯ” ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ, ಸಚಿವರಾದ ಯು ಟಿ ಖಾದರ್, ರಿಜ್ವಾನ್ ಅರ್ಷದ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಮಂಕಾಳ್ ವೈದ್ಯ, ವೇದವ್ಯಾಸ ಕಾಮತ್, ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವಾನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್ ಸೋಮಸುಂದರ, ಖಜಾಂಚಿ ಪದ್ಮರಾಜ್ ಪೂಜಾರಿ, ಯುವ ಮುಖಂಡ ಮಿಥುನ್ ರೈ ಹಾಗೂ ಮತ್ತಿತರರು ಇದ್ದರು.












