ಮಂಗಳೂರು ದಸರಾ: ಅ.11ರಿಂದ ಕುದ್ರೋಳಿ ದೇವಸ್ಥಾನದ ಸುತ್ತಮುತ್ತ ಸಂಚಾರ ಬದಲಾವಣೆ
ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಂಜೆ 4 ಗಂಟೆಯಿಂದ ವಿವಿಧ ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಕೂಳೂರು ಫೆರಿ ರಸ್ತೆಯ ಕಾರ್‌ಸ್ಟ್ರೀಟ್–ಬಾಲಾಜಿ ಜಂಕ್ಷನ್–ನ್ಯೂ ಚಿತ್ರಾ ಜಂಕ್ಷನ್–ಅಳಕೆ ಬ್ರಿಡ್ಜ್–ಕುದ್ರೋಳಿ ದೇವಸ್ಥಾನದ ದ್ವಾರ–ದುರ್ಗಾಮಹಲ್ ಜಂಕ್ಷನ್–ಮಣ್ಣಗುಡ್ಡೆ ಜಂಕ್ಷನ್ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಸಂಜೆ ವೇಳೆಯಲ್ಲಿ ಕೊಟ್ಟಾರ ಚೌಕಿ ಕಡೆಯಿಂದ ಕಾರ್‌ಸ್ಟ್ರೀಟ್ ಕಡೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್–ಪಿ.ವಿ.ಎಸ್.–ನವಭಾರತ್ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಅದೇ ರೀತಿ, ಕಾರ್‌ಸ್ಟ್ರೀಟ್‌ನಿಂದ ಕೂಳೂರು ಫೆರಿ ರಸ್ತೆ ಕಡೆಗೆ ತೆರಳುವ ವಾಹನಗಳು ನವಭಾರತ್–ಪಿ.ವಿ.ಎಸ್. ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಲಾಗಿದೆ.
ಕೂಳೂರು ಫೆರಿ ರಸ್ತೆಯ ನ್ಯೂ ಚಿತ್ರಾ ಜಂಕ್ಷನ್‌ನಿಂದ ಲೇಡಿಹಿಲ್‌ವರೆಗೆ ಹಾಗೂ ಈ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲುಗಡೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಸುಗಮ ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಲಾಗಿದೆ.













