ಮಂಗಳೂರು| ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Spread the love

ಮಂಗಳೂರು| ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆಗಳಲ್ಲಿ ವ್ಯತ್ಯಯದಿಂದ ಎದುರಾದ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳೂರು ಕಾರಾಗೃಹದ ಆವರಣದಲ್ಲಿ ಅಳವಡಿಸಿರುವ ಮೊಬೈಲ್ ಸಿಗ್ನಲ್ ಜಾಮರ್‌ಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮೊಬೈಲ್ ಸಂಪರ್ಕದ ಮೇಲೆ ಅನಗತ್ಯ ಪರಿಣಾಮ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಂಟಿ ತಾಂತ್ರಿಕ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆಯ ಆಧಾರದ ಮೇಲೆ ಸಂಬಂಧಪಟ್ಟ ಸಂಸ್ಥೆಯು ಕಾರಾಗೃಹದ ಭದ್ರತಾ ಅಗತ್ಯತೆಗಳಿಗೆ ಅನುಗುಣವಾಗಿ ಆಂಟೆನಾಗಳ ವಿನ್ಯಾಸ ಹಾಗೂ ಜಾಮರ್‌ಗಳ ಸಾಮರ್ಥ್ಯವನ್ನು ಸರಿಹೊಂದಿಸುವ ಕ್ರಮಕೈಗೊಂಡಿದೆ. ಕಾರಾಗೃಹದೊಳಗೆ ಜಾಮರ್‌ಗಳು ತಮ್ಮ ಉದ್ದೇಶಿತ ಭದ್ರತಾ ಕಾರ್ಯವನ್ನು ಪರಿಣಾಮಕಾರಿ ಯಾಗಿ ನಿರ್ವಹಿಸುವುದರ ಜೊತೆಗೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮೊಬೈಲ್ ಸಂಪರ್ಕ ಸೇವೆಗಳಲ್ಲಿ ಉಂಟಾ ಗುತ್ತಿರುವ ಅನಗತ್ಯ ವ್ಯತ್ಯಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮತ್ತಷ್ಟು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ಮಾಹಿತಿ ನಿಡಿದ್ದಾರೆ.

ಈ ನಿಟ್ಟಿನಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಮನ್ವಯ ಸಾಧಿಸಿ, ಮೊಬೈಲ್ ನೆಟ್‌ವರ್ಕ್ ಸೇವೆಗಳ ಮೇಲೆ ಜಾಮರ್‌ಗಳಿಂದ ಉಂಟಾಗುತ್ತಿರುವ ಪರಿಣಾಮವನ್ನು ತಗ್ಗಿಸಲು ಅಗತ್ಯವಿರುವ ತಾಂತ್ರಿಕ ಹೊಂದಾಣಿಕೆ ಗಳನ್ನು ಮಾಡಲಾಗುತ್ತಿದೆ. ಕಾರಾಗೃಹದ ಭದ್ರತೆ ಅತ್ಯಂತ ಮುಖ್ಯವಾಗಿರುವಂತೆಯೇ, ಕಾರಾಗೃಹದ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಮತ್ತು ಇತರ ಬಳಕೆದಾರರಿಗೆ ಮೊಬೈಲ್ ಸಂಪರ್ಕ ಸೇವೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಈ ಎರಡೂ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಂಟಿ ತಾಂತ್ರಿಕ ಸಮೀಕ್ಷೆಯ ಆಧಾರದ ಮೇಲೆ ಈಗಾಗಲೇ ಅಗತ್ಯ ಹೊಂದಾಣಿಕೆಗಳನ್ನು ಕೈಗೊಳ್ಳಲಾಗಿದೆ. ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಮನ್ವಯದಿಂದ ಮತ್ತಷ್ಟು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಾರಾಗೃಹದ ಭದ್ರತಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಾಪಾಡಿಕೊಂಡೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಹಾಗೂ ತಾಂತ್ರಿಕ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Spread the love
Subscribe
Notify of

0 Comments