ಮಂಗಳೂರು: ಕೆಎಫ್‌ಸಿಗೆ ದಾಳಿ; 7-8 ತಿಂಗಳ ಹಿಂದಿನ ಮಾಂಸ ದಾಸ್ತಾನು ಪತ್ತೆ!

Spread the love

ಮಂಗಳೂರು: ಕೆಎಫ್‌ಸಿಗೆ ದಾಳಿ; 7-8 ತಿಂಗಳ ಹಿಂದಿನ ಮಾಂಸ ದಾಸ್ತಾನು ಪತ್ತೆ

ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯ ಮಾಲ್‌ವೊಂದರಲ್ಲಿರುವ ಕೆಎಫ್‌ಸಿಯಲ್ಲಿ ಕಲುಷಿತ ಆಹಾರ ಪೂರೈಕೆ ಮಾಡಿದ ಆರೋಪದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಶನಿವಾರ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಕೆಎಫ್‌ಸಿಯಲ್ಲಿ ಅನೈರ್ಮಲ್ಯ, ಸ್ಟೋರೇಜ್‌ನಲ್ಲಿ ಹಳೆಯ ಮಾಂಸ ಪತ್ತೆ, ಅವಧಿ ಮೀರಿದ ಎಣ್ಣೆ ಕಂಡು ಬಂದಿದೆ. ಇವೆಲ್ಲವನ್ನೂ ಅಧಿಕಾರಿಗಳು ವಶಪಡಿಸಿಕೊಂಡು ಬೀಗ ಹಾಕಿಸಿದ್ದಾರೆ. ಅಲ್ಲದೆ ಪತ್ತೆಯಾದ ಸ್ಯಾಂಪಲ್‌ ಗಳನ್ನು ಪರೀಕ್ಷೆ ಮಾಡಲು ಮೈಸೂರಿಗೆ ಕಳುಹಿಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ವ್ಯಕ್ತಿಯೊಬ್ಬರು ಕೆಎಫ್‌ಸಿಯಿಂದ ಚಿಕನ್ ಫೆರಿ ಆರ್ಡರ್ ಮಾಡಿದ್ದು, ಅದರಂತೆ ಸರಬರಾಜು ಮಾಡಲಾ ಗಿತ್ತು. ಅದರ ಬಾಕ್ಸ್ ತೆರೆದಾಗ ಮಾಂಸ ಕೆಟ್ಟ ವಾಸನೆ ಬಂದಿತ್ತು. ತಕ್ಷಣ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ರ ಗಮನಕ್ಕೆ ತಂದಿದ್ದಾರೆ. ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಜಂಟಿಯಾಗಿ ಕೆಎಫ್‌ಸಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

*ಕೆಎಫ್‌ಸಿಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿದ್ದು ಎನ್ನಲಾಗಿದೆ. ಸುಮಾರು 7-8 ತಿಂಗಳ ಹಿಂದಿನ ಮಾಂಸವನ್ನು ಇಲ್ಲಿ ದಾಸ್ತಾನಿಡಲಾಗುತ್ತಿತ್ತು ಎನ್ನಲಾಗಿದೆ. ಅಧಿಕಾರಿಗಳು ಸ್ಟೋರೆಜ್ ರೂಂ ಪ್ರವೇಶಿಸಿದಾಗ ಗಬ್ಬು ವಾಸನೆ ಬರುತ್ತಿದ್ದು, ಈ ಬಗ್ಗೆ ಸಿಬ್ಬಂದಿಗಳ ಬಳಿ ಪ್ರಶ್ನಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಈ ಸ್ಟೊರೇಜ್‌ನಲ್ಲಿ ಮೂರು ಮಾದರಿಯ ಚಿಕನ್‌ಗಳನ್ನು ದಾಸ್ತಾನಿಡಲಾಗಿತ್ತು. ಅದಲ್ಲದೆ ಅವಧಿ ಮೀರಿದ ಎಣ್ಣೆ ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರ ದೂರಿನ ಮೇರೆಗೆ ದಾಳಿ ಮಾಡಿದಾಗ ಮೂರು ಮಾದರಿಯ ಕೋಳಿ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಅದರ ಗುಣಕ್ಷಿುಟ್ಟದ ಪರಿಶೀಲನೆಗೆ ಮೈಸೂರಿನ ಆಹಾರ ತಪಾಸಣಾ ಲ್ಯಾಬೋರೇಟರಿಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮೇಲ್ನೋಟಕ್ಕೆ ಕಲುಷಿತ ಆಹಾರ ನೀಡಿರುವುದು ಮತ್ತು ಅನೈರ್ಮಲ್ಯ, ಹಳಸಿದ ಮಾಂಸ, ಅವಧಿ ಮೀರಿದ ಎಣ್ಣೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಸದ್ಯ ಮಳಿಗೆಯನ್ನು ಬಂದ್ ಮಾಡಲು, ಎಲ್ಲಾ ಉತ್ಪನ್ನಗಳನ್ನು ತೆರವು ಮಾಡಿ ಶುಚಿಗೊಳಿಸಲು ಸೂಚಿಸಲಾಗಿದೆ. ಲ್ಯಾಬೋರೇಟರಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ತಿಳಿಸಿದ್ದಾರೆ.


Spread the love
Subscribe
Notify of

0 Comments