ಮಣಿಪಾಲ| ನಕಲಿ ಕ್ಯೂಆರ್ ಕೋಡ್ ಮೂಲಕ ₹12 ಲಕ್ಷ ವಂಚನೆ ಪ್ರಕರಣ: ಆರು ಮಂದಿ ಬಂಧನ
ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್ನಲ್ಲಿ ಬ್ಯಾಟರಿ ಚಾಲಿತ ವಾಹನಗಳ ಪ್ರಯಾಣಿಕರ ಶುಲ್ಕವನ್ನು ನಕಲಿ ಕ್ಯೂಆರ್ ಕೋಡ್ ಮೂಲಕ ಸಂಗ್ರಹಿಸಿ ಕಂಪನಿಗೆ ₹12 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಿದ್ದಮೂರ್ತಿ ಜಿ. (29), ಶಿವರಾಜ್ ನಾಯ್ಕ್ (30), ಸುದೀಪ್ (30), ಜಿತೇಶ್ ಎಲ್. ಕಾಂಚನ್ (29), ಮುತ್ತಣ್ಣ ಅಢೀನವರ (32) ಹಾಗೂ ಎಂ.ಬಿ. ಅವಿನಾಶ್ (24) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಐಶ್ವರ್ಯ ಮುತ್ತಣ್ಣ ಅಢೀನವರ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಣಿಪಾಲದ ಎಂಐಟಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಚಾರಕ್ಕಾಗಿ ಬ್ಯಾಟರಿ ಚಾಲಿತ ವಾಹನ ಸೇವೆ ಒದಗಿಸುವ Indeanta E-Mobility Pvt. Ltd. ಕಂಪನಿಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಆರೋಪಿಗಳು ಏಪ್ರಿಲ್ 1, 2026ರಿಂದ ಕಂಪನಿಗೆ ಸೇರಬೇಕಿದ್ದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಕ್ಯೂಆರ್ ಕೋಡ್ ಮೂಲಕ ಸ್ವೀಕರಿಸದೆ, ನಕಲಿ ವ್ಯವಹಾರ ಖಾತೆ ತೆರೆದು ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಸೃಷ್ಟಿಸಿ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.
ಈ ರೀತಿಯಾಗಿ ಸಂಗ್ರಹಿಸಿದ ₹12 ಲಕ್ಷವನ್ನು ಆರೋಪಿಗಳು ಅಕ್ರಮವಾಗಿ ಮುತ್ತಣ್ಣ ಅಢೀನವರ ಅವರ ಪತ್ನಿ ಐಶ್ವರ್ಯ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ, ಬಳಿಕ ಹಂಚಿಕೊಂಡು ಕಂಪನಿಗೆ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 161/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 316(4), 316(5), 318(2), 318(3), 318(4) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮುಂದುವರಿಸಿದ ತನಿಖಾಧಿಕಾರಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಶಂಭುಲಿಂಗಯ್ಯ ಎಂ.ಇ. ಅವರು ಅಕ್ಟೋಬರ್ 2ರಂದು ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.













