ಶಿಥಿಲಗೊಂಡ ಕಟ್ಟಡಗಳ ಸುರಕ್ಷತಾ ಪರಿಶೀಲನೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ

Spread the love

ಶಿಥಿಲಗೊಂಡ ಕಟ್ಟಡಗಳ ಸುರಕ್ಷತಾ ಪರಿಶೀಲನೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ

ಮಂಗಳೂರು: ನಗರದಲ್ಲಿರುವ ಶಿಥಿಲಗೊಂಡ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿರುವ ಕಟ್ಟಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯಂಗ್ ಡೆಮಾಕ್ರಟ್ಸ್ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ಮಂಗಳೂರಿನಲ್ಲಿ ಶಿಥಿಲಗೊಂಡ ಕಟ್ಟಡವೊಂದರಿಂದ ವಿದ್ಯಾರ್ಥಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಅತ್ಯಂತ ದುಃಖಕರವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ನಗರದ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳ ಸುರಕ್ಷತೆ ಕುರಿತು ತಕ್ಷಣ ಗಮನಹರಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಗರದಲ್ಲಿರುವ ಎಲ್ಲಾ ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳನ್ನು ತಜ್ಞರ ಮೂಲಕ ಪರಿಶೀಲಿಸಿ, ಅಪಾಯಕಾರಿಯಾಗಿರುವ ಕಟ್ಟಡಗಳನ್ನು ಗುರುತಿಸಬೇಕು. ಅಂತಹ ಕಟ್ಟಡಗಳ ಮಾಲೀಕರಿಗೆ ಅಗತ್ಯ ಸೂಚನೆ ನೀಡಿ, ಕಟ್ಟಡಗಳನ್ನು ದುರಸ್ತಿ ಮಾಡಿಸುವ ಅಥವಾ ನಿಯಮಾನುಸಾರ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಅಲ್ಲದೆ, ಕಟ್ಟಡ ಪರವಾನಗಿ ನವೀಕರಣದ ಸಂದರ್ಭದಲ್ಲಿ ಕಟ್ಟಡದ ಸ್ಥಿರತೆ ಹಾಗೂ ಸುರಕ್ಷತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಶಾಲಾ-ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಪ್ರದೇಶಗಳಲ್ಲಿರುವ ಅಪಾಯಕಾರಿ ಕಟ್ಟಡಗಳ ಸುತ್ತ ಸುರಕ್ಷತಾ ತಡೆಗೋಡೆ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಕಟ್ಟಡದ ಪರವಾನಗಿಯನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಹಾಗೂ ತೆರವು ಕಾರ್ಯಾಚರಣೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ನಿಯಮಿತವಾಗಿ ಸುರಕ್ಷತಾ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಯಂಗ್ ಡೆಮಾಕ್ರಟ್ಸ್ ಮಂಗಳೂರು ನಗರ ಜಿಲ್ಲಾ ಕನ್ವೀನರ್ ಇರ್ಫಾನ್ ತುಂಬೆ, ಜಂಟಿ ಕನ್ವೀನರ್‌ಗಳಾದ ತನ್ವೀರ್ ಉಳ್ಳಾಲ, ಶರ್ಫುದ್ಧಿನ್ ಬಜ್ಪೆ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಹಮೀದ್ ಮತ್ತು ಅನ್ಸಾರ್ ಕುದ್ರೋಳಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments