ಶಾಲಾ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡ ಶಾಸಕ ಹರೀಶ್ ಪೂಂಜಾ ನಡೆ ಖಂಡನೀಯ: ಕೀರ್ತನ್ ಗೌಡ ಕೊಡಪಾಲ

Spread the love

ಶಾಲಾ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡ ಶಾಸಕ ಹರೀಶ್ ಪೂಂಜಾ ನಡೆ ಖಂಡನೀಯ: ಕೀರ್ತನ್ ಗೌಡ ಕೊಡಪಾಲ

ಮಂಗಳೂರು: ಬೆಳ್ತಂಗಡಿಯ ಪೂಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಅವರು ರಾಜಕೀಯ ಪ್ರೇರಿತ ಭಾಷಣ ಮಾಡಿ ಶಾಲಾ ಮಕ್ಕಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಎನ್.ಎಸ್.ಯು.ಐ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲೆಗಳು ಜ್ಞಾನ ದೇಗುಲಗಳಾಗಿದ್ದು, ಮಕ್ಕಳ ಭವಿಷ್ಯವನ್ನು ರೂಪಿಸುವ ಪವಿತ್ರ ಸ್ಥಳಗಳಾಗಿವೆ. ಆದರೆ, ಪೂಂಜಾಲಕಟ್ಟೆಯ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಮತ್ತು ಮುಗ್ಧ ಶಾಲಾ ಮಕ್ಕಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ಪ್ರಜಾಪ್ರಭುತ್ವ ಹಾಗೂ ಶಿಕ್ಷಣ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಸಭಾಭವನದ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘಿಸಿ ಮುಂದಾಗಿದ್ದನ್ನು ಪ್ರಶ್ನಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ರದ್ದಾಗಿತ್ತು. ಆದರೆ, ಬಳಿಕ ಖಾಸಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಶಾಲೆಯ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಶಾಲಾ ಮಕ್ಕಳಿಂದ ರಾಜಕೀಯ ನಾಯಕರ ಪರವಾಗಿ ಜಯಕಾರ ಹಾಕಿಸಿರುವುದು ಶಿಕ್ಷಣ ಇಲಾಖೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಜಕೀಯ ಪಕ್ಷಗಳ ಪರ-ವಿರೋಧದ ಅಭಿಪ್ರಾಯಗಳನ್ನು ಮಕ್ಕಳ ಮೇಲೆ ಹೇರುವುದಾಗಲಿ ಅವರನ್ನು ರಾಜಕೀಯ ಪ್ರಚಾರದ ಭಾಗವಾಗಿಸುವುದಾಗಲಿ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಶೈಕ್ಷಣಿಕ ಸಂಸ್ಥೆಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಇಂತಹ ಬೆಳವಣಿಗೆಗಳನ್ನು ನಾಗರಿಕ ಸಮಾಜ ಎಂದಿಗೂ ಸಹಿಸುವುದಿಲ್ಲ. ಶಾಲಾ ಮಕ್ಕಳ ಮನಸ್ಸಿನಲ್ಲಿ ರಾಜಕೀಯ ವಿಚಾರಗಳನ್ನು ಬಿತ್ತುವ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಈ ಘಟನೆಯ ಕುರಿತು ಶಿಕ್ಷಣ ಇಲಾಖೆಯು ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೀರ್ತನ್ ಗೌಡ ಕೊಡಪಾಲ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments