ಶಾಸಕ ಯಶ್ಪಾಲ್ ದ್ವೇಷ ಭಾಷಣ: ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡುವ ಹುನ್ನಾರ – ಹಮ್ಮದ್ ಉಡುಪಿ
ಉಡುಪಿ: ಭಾರತೀಯ ಜನತಾ ಪಕ್ಷ ಉಡುಪಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಬಾಬರಿ ಮಸೀದಿಯನ್ನು ಉಲ್ಲೇಖಿಸಿ ಆಡಿರುವ ಸಂವಿಧಾನ ವಿರೋಧಿ ಹಾಗೂ ಪ್ರಚೋದನಾಕಾರಿ ಭಾಷಣವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಮ್ಮದ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸದಾ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸುವುದರಲ್ಲೇ ತಮ್ಮ ಸಂತೋಷವನ್ನು ಕಾಣುವ ಉಡುಪಿಯ ಶಾಸಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೀಯಾಳಿಸುವ ಭರದಲ್ಲಿ ಮುಸ್ಲಿಂ ಸಮುದಾಯದ ಬಾಬರಿ ಮಸೀದಿಯ ಧ್ವಂಸ ವಿಚಾರವನ್ನು ಉಲ್ಲೇಖಿಸಿರುವುದು ಕಳವಳಕಾರಿ ಸಂಗತಿಯಾಗಿದೆ. ಸಮಾಜದಲ್ಲಿ ಧರ್ಮಗಳ ನಡುವೆ ದ್ವೇಷ ಭಾವನೆಯನ್ನು ಬಿತ್ತಿ ಸಂಘರ್ಷವನ್ನು ಉಂಟು ಮಾಡುವ ಹುನ್ನಾರವನ್ನು ಶಾಸಕರು ಹೊಂದಿರುವುದು ಅವರ ಮಾತಿನಿಂದ ಎದ್ದು ಕಾಣುತ್ತದೆ.
ಸಮಾಜದಲ್ಲಿ ಅಶಾಂತಿ ಮತ್ತು ವೈಮನಸ್ಸು ಸೃಷ್ಟಿಸುವ ಪ್ರಯತ್ನವಾಗಿದ್ದು, ಜನಪ್ರತಿನಿಧಿಯೊಬ್ಬರಿಗೆ ಶೋಭೆ ತರುವುದಿಲ್ಲ. ಯಶ್ಪಾಲ್ ಸುವರ್ಣ ಅವರ ಹೇಳಿಕೆಗಳು ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಸ್ವರೂಪದ್ದಾಗಿದ್ದು, ರಾಜ್ಯದ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ.
ಈ ಪ್ರಕರಣವನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರುವುದರಿಂದ ಶಾಸಕ ಯಶ್ಪಾಲ್ ಸುವರ್ಣ ಅವರ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.













