ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

Spread the love

ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

ಮಂಗಳೂರು: ದೇಶದ ಮತಪಟ್ಟಿಯ ಸಮಗ್ರ ಶುದ್ಧೀಕರಣದ ಎಸ್.ಐ.ಆರ್ ಪ್ರಕ್ರಿಯೆ ಕುರಿತು ಅಪಪ್ರಚಾರ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳ ವಿರುದ್ಧ ನ. 6ರಂದು ಮಂಗಳೂರಿನಲ್ಲಿ “ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ, ಸಂವಿಧಾನ ರಕ್ಷಿಸಿ” ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾದ ಸುರೇಶ್ ಗೋಪಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಪಾದಯಾತ್ರೆಯು ಶುಕ್ರವಾರ ಅಪರಾಹ್ನ 3:00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದಿಂದ ಆರಂಭಗೊಂಡು ಕದ್ರಿ ಮೈದಾನದವರೆಗೆ ಸಾಗಲಿದೆ. ತದನಂತರ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಂಸದರು ವಿವರಿಸಿದ್ದಾರೆ.

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಹುನ್ನಾರದ ವಿರುದ್ಧ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಬಲಪಡಿಸಲು ಮತ್ತು ಜನಸಾಮಾನ್ಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಯುವಜನರ ಬೆಂಬಲ ಅತ್ಯಗತ್ಯವಾಗಿದ್ದು, ಸಮಸ್ತ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕು ಎಂದು ಕ್ಯಾ. ಚೌಟ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.


Spread the love
Subscribe
Notify of

0 Comments