ಮೊಬೈಲ್ ವಿಚಾರವಾಗಿ ಗೆಳೆಯನ ಕೊಲೆ: ತೋಟಬೆಂಗ್ರೆಯ ಧರ್ಮರಾಜ್ ಸುವರ್ಣಗೆ ಜೀವಾವಧಿ ಶಿಕ್ಷೆ

Spread the love

ಮೊಬೈಲ್ ವಿಚಾರವಾಗಿ ಗೆಳೆಯನ ಕೊಲೆ: ತೋಟಬೆಂಗ್ರೆಯ ಧರ್ಮರಾಜ್ ಸುವರ್ಣಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮೊಬೈಲ್ ಫೋನ್ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ತೋಟಬೆಂಗ್ರೆಯ ಧರ್ಮರಾಜ್ ಸುವರ್ಣ (50) ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಜಗದೀಶ್ ಅವರು ಅ.12ರಂದು ತೀರ್ಪು ಪ್ರಕಟಿಸಿದ್ದು, ಆರೋಪಿಗೆ ₹15,000 ದಂಡವನ್ನೂ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.

2024ರ ಸೆಪ್ಟೆಂಬರ್ 21ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಭಾಗದ ಸಮುದ್ರ ತೀರದಲ್ಲಿ ಭಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಎಂಬವರ ಕೊಲೆ ನಡೆದಿತ್ತು. ಈ ಸಂಬಂಧ ಮೃತರ ಸಂಬಂಧಿ ಹನುಮಂತ ದುರ್ಗಪ್ಪ ವಡ್ಡರ್ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2024ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 103(1)ರಂತೆ ಪ್ರಕರಣ ದಾಖಲಾಗಿತ್ತು.

ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ ಪರಿಚಯಸ್ಥರಾಗಿದ್ದರು. ಧರ್ಮರಾಜ್ ಸುವರ್ಣ ಇತ್ತೀಚೆಗೆ ಹೊಸ ಮೊಬೈಲ್ ಖರೀದಿಸಿದ್ದು, ಅದನ್ನು ಮುತ್ತು ಬಸವರಾಜ್ ತೆಗೆದುಕೊಂಡು ಹಿಂತಿರುಗಿಸದೆ, ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಧರ್ಮರಾಜ್ ಸುವರ್ಣ ಮರದ ಸೋಂಟೆಯಿಂದ ಮುತ್ತು ಬಸವರಾಜ ವಡ್ಡರ್ ಅವರನ್ನು ಹೊಡೆದು ಕೊಲೆ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.

ಪ್ರಕರಣದ ಬಳಿಕ ಆರೋಪಿ ಧರ್ಮರಾಜ್ ಸುವರ್ಣನನ್ನು 2024ರ ಸೆಪ್ಟೆಂಬರ್ 26ರಂದು ಬೆಳಗಿನ ಜಾವ 3 ಗಂಟೆಗೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್ ಅವರು ಭಾಗಶಃ ನಡೆಸಿದ್ದರು. ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರ್ಪಡೆಗೊಳಿಸಿದ ಹಿನ್ನೆಲೆಯಲ್ಲಿ ಮುಂದಿನ ತನಿಖೆಯನ್ನು ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರಿಗೆ ವಹಿಸಲಾಗಿತ್ತು. ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಶೇಷ ಪ್ರಕರಣ ಸಂಖ್ಯೆ 207/2024ರ ಅಡಿಯಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಾದ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.


Spread the love
Subscribe
Notify of

0 Comments