ನ.5 : ಶಕುಂತಲಾ ಶೆಟ್ಟಿ ಅವರ ‘ತುಳುವೆರೆ ತಿಂಗೊಲ್ದ ಪೊಲಬು’ ಕೃತಿ ಬಿಡುಗಡೆ
ಮಂಗಳೂರು: ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭವು ನ.5. ರಂದು ಸಂಜೆ 4.00 ಗಂಟೆಗೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.
ತುಳುನಾಡಿನಲ್ಲಿ ಪ್ರತಿ ತಿಂಗಳಲ್ಲಿ ಇರುವ ವಿಶೇಷತೆಗಳ ಬಗ್ಗೆ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ತುಳುವೆರೆ ತಿಂಗೊಲ್ದ ಪೊಲಬು’ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿತ ಶಕುಂತಲಾ ಶೆಟ್ಟಿ ಅವರ ಆತ್ಮಕಥನ ‘ಚಿತ್ತ ಭಿತ್ತಿಯ ಪತ್ತಾಯ’ ಪುಸ್ತಕದ ಬಿಡುಗಡೆ ನಡೆಯಲಿದೆ.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಇವರ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸುವರು.
ತುಳುವೆರೆ ತಿಂಗೊಲ್ದ ಪೊಲಬು ಪುಸ್ತಕವನ್ನು ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಬಿಡುಗಡೆಗೊಳಿಸಿ, ಕೃತಿ ಅವಲೋಕನ ನಡೆಸುವರು. ಲೇಖಕರಾದ ಡಾ.ನರೇಂದ್ರ ರೈ ದೇರ್ಲ ‘ಚಿತ್ತ ಭಿತ್ತಿಯ ಪತ್ತಾಯ’ ಪುಸ್ತಕ ಬಿಡುಗಡೆಗೊಳಿಸಿ ಕೃತಿ ಅವಲೋಕನ ನಡೆಸುವರು.
ಹಿರಿಯ ಲೇಖಕಿ ಹಾಗೂ ಸಂಶೋಧಕಿ ಬಿ.ಎಂ.ರೋಹಿಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಮುಖ್ಯಸ್ಥ ಕಲ್ಲೂರು ನಾಗೇಶ, ಕರಾವಳಿ ಲೇಖಕಿಯರ ಸಂಘದ ಕಾರ್ಯದರ್ಶಿ ಶ್ರೀಮತಿ ಕೃಷ್ಣವೇಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.













