ಪುತ್ತೂರಿನಲ್ಲಿ ಯಾವುದೇ ಬಲವಂತದ ಬಂದ್ ಇಲ್ಲ: ಎಸ್ಪಿ ಅರುಣ್ ಕುಮಾರ್
ಪುತ್ತೂರು: ಪುತ್ತೂರು ನಗರದಲ್ಲಿ ಯಾವುದೇ ಬಲವಂತದ ಬಂದ್ ನಡೆದಿರುವುದು ಪೊಲೀಸ್ ಗಮನಕ್ಕೆ ಬಂದಿಲ್ಲ. ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಬಹುತೇಕ ಅಂಗಡಿಗಳು ಸಹಜವಾಗಿ ಬಂದ್ ಆಗಿದ್ದು, ಇದನ್ನು ಬಲವಂತದ ಬಂದ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪುತ್ತೂರು ನಗರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ನಗರದಲ್ಲಿ ಅಂಗಡಿಗಳು ಬಂದ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, “ಯಾವುದೇ ಫೋರ್ಸ್‌ಫುಲ್ ಬಂದ್ ಕಂಡುಬಂದಿಲ್ಲ. ರಜಾ ದಿನಗಳಲ್ಲಿ ಸಾಮಾನ್ಯವಾಗಿ ಅಂಗಡಿಗಳು ಮುಚ್ಚಿರುವ ರೀತಿಯಲ್ಲೇ ಅಂಗಡಿಗಳು ಬಂದ್ ಆಗಿವೆ ಎಂಬ ವರದಿಗಳು ಬಂದಿವೆ. ಕೆಲವು ಕಡೆಗಳಲ್ಲಿ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವಂತೆ ಕರೆ ನೀಡಿರುವ ಬಗ್ಗೆ ಮಾಹಿತಿ ಇದ್ದರೂ, ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿರುವ ಘಟನೆಗಳು ಪೊಲೀಸ್ ಗಮನಕ್ಕೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದ್ ಪಾಲಿಸುವುದಕ್ಕೂ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವುದಕ್ಕೂ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ” ಎಂದು ಹೇಳಿದರು.
ಹಿಂದಿನ ಪ್ರಕರಣಗಳ ಮಾದರಿಯಲ್ಲೇ ಕ್ರಮ: ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಅವರು, “ಕಾನೂನಿನ ಸೆಕ್ಷನ್‌ಗಳಿಗೆ ಅನುಗುಣವಾಗಿ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದೆ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ನಾವು ನೋಟಿಸ್ ನೀಡಿದ್ದೇವೆ, ಅಗತ್ಯವಿದ್ದಲ್ಲಿ ಬಂಧನವನ್ನೂ ಮಾಡಿದ್ದೇವೆ. ಈ ಪ್ರಕರಣದಲ್ಲಿಯೂ ಹಿಂದೆ ಇದೇ ರೀತಿಯ ಸಂದರ್ಭಗಳಲ್ಲಿ ಅನುಸರಿಸಿದ ಕಾನೂನು ಕ್ರಮವನ್ನೇ ಮುಂದುವರಿಸುತ್ತೇವೆ” ಎಂದರು.
ಒಂದು ಪ್ರಕರಣದಲ್ಲಿ ಬಂಧನ ಮಾಡಲಾಗಿದೆ, ಮತ್ತೊಂದು ಪ್ರಕರಣದಲ್ಲಿ ಬಂಧಿಸಿಲ್ಲ ಎಂಬ ರೀತಿಯಲ್ಲಿ ಪ್ರಕರಣಗಳನ್ನು ಪರಸ್ಪರ ಹೋಲಿಕೆ ಮಾಡುವುದಿಲ್ಲ. ಘಟನೆಯಲ್ಲಿ ಪ್ರಮುಖ ಆರೋಪಿಗಳು ಅಥವಾ ಪ್ರಾಥಮಿಕವಾಗಿ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಂತರದ ಹಂತಗಳಲ್ಲಿ ಪರಿಸ್ಥಿತಿ ಮತ್ತು ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಹಲವಾರು ಪ್ರಕರಣಗಳಲ್ಲಿ ನೋಟಿಸ್ ನೀಡಿರುವ ಉದಾಹರಣೆಗಳಿವೆ ಎಂದು ವಿವರಿಸಿದರು.
ಪ್ರಸ್ತುತ ಪ್ರಕರಣದಲ್ಲಿಯೂ ನಡೆದಿರುವ ಘಟನೆಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು. ಘಟನೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ವಿವರವಾಗಿ ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಈದ್ ಮಿಲಾದ್‌ಗೆ ಬಿಗಿ ಬಂದೋಬಸ್ತ್: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಲು ತಾವು ಭೇಟಿ ನೀಡಿರುವುದಾಗಿ ಎಸ್ಪಿ ತಿಳಿಸಿದರು.
ಪುತ್ತೂರು ಸೇರಿದಂತೆ ಜಿಲ್ಲಾದ್ಯಂತ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪುತ್ತೂರು ವ್ಯಾಪ್ತಿಯಲ್ಲಿ ಒಬ್ಬ ಡಿವೈಎಸ್ಪಿ, ಮೂವರು ಸಿಪಿಐಗಳು, ಐದು ಕೆಎಸ್‌ಆರ್‌ಪಿ ತುಕಡಿಗಳು, ಒಂದು ಎಎಸ್‌ಎಫ್ ಹಾಗೂ ಮೂರು ಡಿಆರ್ ಪಾರ್ಟಿಗಳು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆಗಳು ಹಾಗೂ ಮೆರವಣಿಗೆಗಳು ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿವೆ. ಸಂಜೆ ಪುತ್ತೂರಿನಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದ ಮೆರವಣಿಗೆ ನಡೆಯಲಿದ್ದು, ಅದಕ್ಕೂ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.













