ಅಪಹರಣ ಅಲ್ಲ, ಪಾಲಕರೇ ಕರೆದುಕೊಂಡು ಹೋಗಿದ್ದರು: ಘಟನೆ ಕುರಿತು ಮೆಡಿಕಲ್ ಕಾಲೇಜು ಡೀನ್ ಸ್ಪಷ್ಟನೆ

Spread the love

ಅಪಹರಣ ಅಲ್ಲ, ಪಾಲಕರೇ ಕರೆದುಕೊಂಡು ಹೋಗಿದ್ದರು: ಘಟನೆ ಕುರಿತು ಮೆಡಿಕಲ್ ಕಾಲೇಜು ಡೀನ್ ಸ್ಪಷ್ಟನೆ

ಮಂಗಳೂರು : ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನ ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಗುರುವಾರ ಆಕೆಯ ಕುಟುಂಬಸ್ಥರು ಬಲವಂತಾಗಿ ವಾಹನದಲ್ಲಿ ಎಳೆದೊಯ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ‘ಇದು ಅಪಹರಣವಲ್ಲ, ವಿದ್ಯಾರ್ಥಿನಿಯ ಪೋಷಕರೇ ಬಂದು ಮನೆಗೆ ಹೋಗಿರುವುದಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೀನ್ ಡಾ.ಶಹನವಾಝ್ ಮಾಣಿಪ್ಪಾಡಿ ‘ನಮ್ಮ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣವಾಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಕೆ ಕಳೆದ ಕೆಲವು ದಿನಗಳಿಂದ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಕುರಿತು ಆಕೆಯ ಪೋಷಕರು ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದರು. ಅದೇ ದಿನ ಆಕೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಹೋಗಿ ಅವರ ವೈಯುಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಕರ ವಿರುದ್ದವೇ ದೂರು ನೀಡಿದ್ದಳು. ನಾವು ಕೂಡಾ ಆಕೆ ಕಾಲೇಜು ಹಾಸ್ಟೆಲ್ ಪರಿಸರದಲ್ಲಿ ಇಲ್ಲದಿರುವ ಕಾರಣ ನ.18ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದು ತಿಳಿಸಿದ್ದಾರೆ.

YouTube player

ಪಾಂಡೇಶ್ವರ ಪೊಲೀಸರು ಆಕೆಯನ್ನು ಎಸ್ಕಾರ್ಟ್ ಮೂಲಕ ಉಳ್ಳಾಲ ಠಾಣೆಗೆ ಕರೆದುಕೊಂಡು ಬಂದು ಆಕೆಯ ಪೋಷಕರೊಂದಿಗೆ ಮತ್ತು ಕಾಲೇಜಿಗೂ ಬಂದು ಅವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದ್ದರು. ಮರುದಿನ ಪೋಷಕರು ಸಂಬಂಧಿಕರು ಆಕೆಯ ಕಾಲೇಜಿನಲ್ಲಿ ಇರುವುದನ್ನು ಗಮನಿಸಲು ಹಾಗೂ ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದರು. ಆದರೆ ಈ ಸಂದರ್ಭ ಆಕೆ ಮನೆಯವರ ಜೊತೆ ತೆರಳಲು ನಿರಾಕರಿಸಿದ್ದಳು. ಇರಿಸು ಮುರಿಸಿಗೊಳಗಾದ ಕುಟುಂಬಸ್ಥರು ಆಕೆಯ ವಿರೋಧದ ನಡುವೆಯೂ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಅಲ್ಲಿದ್ದವರು ಯಾರೂ ತಡೆಯಲಿಲ್ಲ. ಯಾಕೆಂದರೆ ಅವರೆಲ್ಲರಿಗೂ ಆಕೆಯನ್ನು ಪೋಷಕರು ಕರೆದುಕೊಂಡು ಹೋಗುವುದು ತಿಳಿದಿತ್ತು ಎಂದು ಸ್ಪಷ್ಟಪಡಿಸಿದರು.

ಈ ಘಟನೆಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಹರಣ ಮಾಡಲಾಗಿದೆ ಎಂಬ ನಿಟ್ಟಿನಲ್ಲಿ ಬಿಂಬಿಸಿ ಕಾಲೇಜಿನ ಘನತೆಗೆ ದಕ್ಕೆ ಉಂಟಾಗುವ ರೀತಿಯಲ್ಲಿ ಮಾಡಿದ್ದಾರೆ. ಆದ್ದರಿಂದ ಇದರ ಸತ್ಯಾಸತ್ಯತೆಯನ್ನು ಅರಿತು ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಡೀನ್ ಡಾ.ಶಹನವಾಝ್ ಮಾಣಿಪ್ಪಾಡಿ ವಿನಂತಿಸಿದ್ದಾರೆ.

ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಮಾತ್ರ ಕಳುಹಿಸಲಾಗುತ್ತದೆ. ಪೋಷಕರನ್ನು ಹೊರತುಪಡಿಸಿ ಅಣ್ಣ ಅಥವಾ ಇತರ ಸಂಬಂಧಿಕರು ಬಂದರೂ ಅವರೊಂದಿಗೆ ವಿದ್ಯಾರ್ಥಿಗಳನ್ನು ಕಳುಹಿಸುವುದಿಲ್ಲ. ಈ ಘಟನೆಯಲ್ಲಿಯೂ ಪೋಷಕರೇ ವಾಹನದಲ್ಲಿದ್ದರು ಎಂದು ಸ್ಪಷ್ಟಪಡಿಸಿದರು.

ಭದ್ರತಾ ಸಿಬ್ಬಂದಿಗೆ ವಿಷಯ ತಿಳಿದ ತಕ್ಷಣ ಅವರು ತನಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಅಕ್ಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ಪೋಷಕರೇ ಬಂದಿದ್ದಾರೆ ಎಂಬ ಮಾಹಿತಿ ಇದ್ದರೂ ಯಾವುದೇ ಭದ್ರತಾ ಲೋಪವಾಗದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕಾಲೇಜಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಜವಾಬ್ದಾರಿ ನಮ್ಮ ಮೇಲಿದೆ. ವಿದ್ಯಾರ್ಥಿನಿಯ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಮ ವಹಿಸಿಲ್ಲ ಎಂದು ಹೇಳಿದರು.

ಇದು ಯಾರೋ ಬಂದು ವಿದ್ಯಾರ್ಥಿನಿಯನ್ನು ಎತ್ತುಕೊಂಡು ಹೋದದಲ್ಲ. ಆಕೆಯ ಪೋಷಕರೇ ಬಂದು ಕರೆದು ಕೊಂಡು ಹೋಗಿರುವುದಾಗಿದೆ. ಆದ್ದರಿಂದ ಇದು ಅಪಹರಣವಲ್ಲ. ಅಲ್ಲದೆ ಪಾಲಕರು ಕರೆದುಕೊಂಡು ಹೋದ ತಕ್ಷಣ ನಾವು ಉಳ್ಳಾಲ ಪೊಲೀಸರಿಗೂ ಮಾಹಿತಿ ನೀಡಿದ್ದೆವು ಎಂದು ತಿಳಿಸಿದರು.

 


Spread the love
Subscribe
Notify of

0 Comments