ಸಂಗೀತ ಕ್ಷೇತ್ರದಲ್ಲಿ ಸುಜ್ಞಾನ ದಾನಿ ಅವರಿಗೆ ಪಿಎಚ್.ಡಿ. ಪದವಿ
ಹಿಂದುಸ್ತಾನಿ ಜಲತರಂಗ ಹಾಗೂ ಗಾಯನ ಕಲಾವಿದರಾದ ಸುಜ್ಞಾನ ದಾನಿ ಅವರು ಜೈನ್ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿಯನ್ನು ಪಡೆದಿದ್ದಾರೆ.
ಡಾ. ಆರತಿ ಎನ್. ರಾವ್ ಅವರ ಮಾರ್ಗದರ್ಶನದಲ್ಲಿ ಅಪರೂಪದ ಜಲತರಂಗ ವಾದ್ಯದ ಕುರಿತು ಇವರು ಕೈಗೊಂಡ ಮಹತ್ವದ ಹಾಗೂ ಮಾರ್ಗದರ್ಶಕ ಸಂಶೋಧನೆಯ ವಿಷಯ “Analytical Study of the Playing Techniques and Performances of Jaltarang in Hindustani Music”.

ಡಾ. ಸುಜ್ಞಾನ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಆಕಾಶವಾಣಿಯಿಂದ ನೇರವಾಗಿ ಬಿ-ಹೈ ಶ್ರೇಣಿಯನ್ನು ಹಾಗೂ ಭಾರತ ಸರ್ಕಾರದ ಯುಜಿಸಿ ನೆಟ್-ಜೆಆರ್ಎಫ್ (UGC NET-JRF) ಸಂಶೋಧನಾ ಫೆಲೋಶಿಪ್ ಅನ್ನು ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ೭ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, ೮ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಗೀತ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಇದಲ್ಲದೆ, ಶಾಸ್ತ್ರೀಯ, ಉಪ -ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಪ್ರಕಾರಗಳಲ್ಲಿ ೧೫೦ಕ್ಕೂ ಹೆಚ್ಚು ಸಂಗೀತ ಸಂಯೋಜನೆಗಳನ್ನು ರಚಿಸಿರುವ ಹೆಗ್ಗಳಿಕೆ ಅವರದು. ಸ್ವರ ನಾದ ಸಂಗೀತ ವಿದ್ಯಾಲಯ (ರಿ) ದ ಸಂಸ್ಥಾಪಕ – ಕಾರ್ಯದರ್ಶಿಯಾಗಿ ಹಿಂದುಸ್ತಾನಿ ಗಾಯನ, ಜಲತರಂಗ, ಮತ್ತು ಸಂವಾದಿನಿ-ಯ ಶಿಕ್ಷಣವನ್ನು ಆಸಕ್ತರಿಗೆ ನೀಡುತ್ತಿದ್ದಾರೆ.
ಡಾ. ಸುಜ್ಞಾನ ಅವರು ಹುಬ್ಬಳ್ಳಿಯ ಶ್ರೀ ಅರುಣ ದಾನಿ ಹಾಗೂ ಜಲತರಂಗ ವಿದುಷಿ ಶಶಿಕಲಾ ದಾನಿ ಅವರ ಪುತ್ರರು. ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿ, ಇಂದು ಖ್ಯಾತ ಜಲತರಂಗ ಕಲಾವಿದ, ಗಾಯಕರಾಗಿ, ಸಂಗೀತ ಸಂಯೋಜಕರಾಗಿ, ಸಂಶೋಧಕರಾಗಿ ಹಾಗೂ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿರುವ ಅವರ ವಿಶಿಷ್ಟ ಸಾಧನೆಯ ಪಯಣವು ಸಂಗೀತ ಮತ್ತು ಶಿಕ್ಷಣದ ಮೇಲಿನ ಅವರ ಅಪಾರ ಆಸಕ್ತಿ, ಪರಿಶ್ರಮ ಹಾಗೂ ಬದ್ಧತೆಗೆ ಸಾಕ್ಷಿಯಾಗಿದೆ.













