ಪ್ರದೀಪ್ ಪೂಜಾರಿ ಹಲ್ಲೆ ಪ್ರಕರಣ: ಸಿಓಡಿ ತನಿಖೆಗೆ ಬಿಲ್ಲವ ಯುವ ವೇದಿಕೆ ಆಗ್ರಹ – ನ. 4ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ

Spread the love

ಪ್ರದೀಪ್ ಪೂಜಾರಿ ಹಲ್ಲೆ ಪ್ರಕರಣ: ಸಿಓಡಿ ತನಿಖೆಗೆ ಬಿಲ್ಲವ ಯುವ ವೇದಿಕೆ ಆಗ್ರಹ – ನ. 4ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ

ಉಡುಪಿ: ಪ್ರದೀಪ್ ಪೂಜಾರಿ ಅವರ ಮೇಲಿನ ಹಲ್ಲೆ ಪ್ರಕರಣದ ಪೊಲೀಸ್ ತನಿಖೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಪ್ರಕರಣವನ್ನು ರಾಜ್ಯದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾದ ಅಪರಾಧ ತನಿಖಾ ಇಲಾಖೆಗೆ (ಸಿಓಡಿ) ವರ್ಗಾಯಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿದಂತೆ ಮಾಧ್ಯಮಗಳಿಗೆ ಮಾಹಿತಿ ಹಾಗೂ ವಿಡಿಯೋ ಬಿಡುಗಡೆ ಮಾಡಲಾಗಿದೆಯೇ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಇಲಾಖೆಯ ತನಿಖಾ ಕ್ರಮಗಳ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಇಲಾಖೆಯ ಮೇಲಿನ ಸಾರ್ವಜನಿಕರ ನಂಬಿಕೆ ಕುಗ್ಗುವ ವಾತಾವರಣ ನಿರ್ಮಾಣವಾಗಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಒಂದು ವೇಳೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಕ್ತಾಯಗೊಳಿಸಿದರೆ ಸಂತ್ರಸ್ತರಿಗೆ ನ್ಯಾಯ ದೊರಕಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಅಗತ್ಯವಿದ್ದು, ಯಾವುದೇ ಪ್ರಭಾವ ಅಥವಾ ಒತ್ತಡಗಳಿಗೆ ಮಣಿಯದೆ ತನಿಖೆ ನಡೆಸಬೇಕು. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಓಡಿ ತನಿಖೆಗೆ ಅಥವಾ ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಬಿಲ್ಲವ ಯುವ ವೇದಿಕೆ ಒತ್ತಾಯಿಸಿದೆ.

ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಜಿಲ್ಲೆಯ ನ್ಯಾಯಪರ ಹೋರಾಟಗಾರರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ನವೆಂಬರ್ 4ರಂದು ಬುಧವಾರ ಬೃಹತ್ ಪ್ರತಿಭಟನೆ ಮತ್ತು ಜನಾಗ್ರಹ ಕಾರ್ಯಕ್ರಮ ನಡೆಸಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ವೇದಿಕೆ ತಿಳಿಸಿದೆ.


Spread the love
Subscribe
Notify of

0 Comments