ಮಂಗಳೂರಿನ MRPL ಸ್ಫೋಟ ದುರಂತಕ್ಕೆ ಪ್ರೀತಿ ಸಾಲಿನ್ಸ್ ತೀವ್ರ ಸಂತಾಪ
ಮಂಗಳೂರಿನ ಎಂಆರ್ಪಿಎಲ್ (MRPL) ನಲ್ಲಿ ಸಂಭವಿಸಿದ ಸ್ಫೋಟ ಮತ್ತು ಅಗ್ನಿ ಅವಘಡದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಈ ದುರ್ಘಟನೆಯಲ್ಲಿ ಹಳೆಯಂಗಡಿ ಮೂಲದ ಮನೀಶ್ ಕರ್ಕಡ ಅವರು ಮೃತಪಟ್ಟಿರುವುದು ಅತ್ಯಂತ ನೋವು ತಂದಿದೆ. ಯುವ ಜೀವವೊಂದನ್ನು ಕಳೆದುಕೊಂಡಿರುವ ಈ ಘಟನೆ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯದರ್ಶಿ ಪ್ರೀತಿ ಸಾಲಿನ್ಸ್ ಹೇಳಿದ್ದಾರೆ
ಈ ಸ್ಫೋಟಕ್ಕೆ ನಿಖರವಾಗಿ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮಗ್ರ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆಯ ಹಿಂದಿರುವ ಕಾರಣಗಳು ಹಾಗೂ ಸುರಕ್ಷತಾ ಲೋಪಗಳಿದ್ದಲ್ಲಿ ಅವುಗಳನ್ನು ಬಹಿರಂಗಪಡಿಸಿ, ಇಂತಹ ದುರ್ಘಟನೆಗಳು ಮತ್ತೆ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ದುರ್ಘಟನೆಯಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಹಾಗೂ ಅಗತ್ಯ ನೆರವು ನೀಡಬೇಕು. ಗಾಯಗೊಂಡಿರುವ ಕಾರ್ಮಿಕರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಮತ್ತು ಸೂಕ್ತ ಪರಿಹಾರವನ್ನು ಒದಗಿಸಬೇಕು.
ಮನೆ ಮಗನನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ ಕುಟುಂಬದ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ













