ಸೋದೆ ಪರ್ಯಾಯೋತ್ಸವದ ಸಿದ್ಧತೆ: ನಾಳೆ ಬಾಳೆ ಮುಹೂರ್ತ, ‘ಕದಳೀ ವಿಶ್ವದರ್ಶನ’ ರಾಷ್ಟ್ರಮಟ್ಟದ ಬಾಳೆ ಮೇಳಕ್ಕೆ ಚಾಲನೆ
‘ಕದಳೀ ವಿಶ್ವದರ್ಶನ’ ರಾಷ್ಟ್ರಮಟ್ಟದ ಬಾಳೆ ಮೇಳಕ್ಕೆ ಚಾಲನೆ; 100ಕ್ಕೂ ಹೆಚ್ಚು ತಳಿಗಳ ಪ್ರದರ್ಶನ
ಉಡುಪಿ: 2028ರ ಜನವರಿ 18ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ನವೆಂಬರ್ 29ರಂದು ಬಾಳೆ ಮುಹೂರ್ತ ನೆರವೇರಲಿದೆ. ಇದರೊಂದಿಗೆ ಪರ್ಯಾಯದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಶ್ರೀಕೃಷ್ಣನ ಪೂಜೆ, ನೈವೇದ್ಯ ಹಾಗೂ ಭಕ್ತರ ಅನ್ನಸಂತರ್ಪಣೆಗೆ ಅಗತ್ಯವಿರುವ ಬಾಳೆ ಉತ್ಪಾದನೆಗೆ ಚಾಲನೆ ನೀಡುವ ಉದ್ದೇಶದಿಂದ ಈ ಧಾರ್ಮಿಕ ಆಚರಣೆ ನಡೆಯುತ್ತದೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜೆ ಸಲ್ಲಿಸುವ ಅವಕಾಶ ದೊರೆಯಲಿದ್ದು, ಪರ್ಯಾಯ ಪೀಠಾರೋಹಣಕ್ಕೂ ಮುನ್ನ ಬಾಳೆ, ಅಕ್ಕಿ, ಕಟ್ಟಿಗೆ ಮತ್ತು ಭತ್ತದ ನಾಲ್ಕು ಮುಹೂರ್ತಗಳನ್ನು ನೆರವೇರಿಸುವ ಸಂಪ್ರದಾಯವಿದೆ. ಅನ್ನಬ್ರಹ್ಮನ ಸೇವೆಗೆ ಅಗತ್ಯವಾದ ಸಿದ್ಧತೆಗಳನ್ನು ಪ್ರಕೃತಿಯ ಮಡಿಲಿನಿಂದಲೇ ಆರಂಭಿಸುವುದು ಈ ಆಚರಣೆಯ ವಿಶೇಷತೆಯಾಗಿದೆ.
ನವೆಂಬರ್ 29ರಂದು ಬೆಳಿಗ್ಗೆ 6.30ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿ ಹಾಗೂ ಶ್ರೀಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಯಲಿದೆ. ಬಳಿಕ ಬೆಳಿಗ್ಗೆ 7.45ಕ್ಕೆ ಸೋದೆ ಮಠದ ಆವರಣದ ತೋಟದಲ್ಲಿ ಬಾಳೆ, ಕಬ್ಬು ಮತ್ತು ತುಳಸಿ ಗಿಡಗಳನ್ನು ನೆಡುವ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.

ಮೂರು ದಿನಗಳ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ
ಬಾಳೆಯ ಕೃಷಿ, ಸಂಸ್ಕೃತಿ, ಪರಂಪರೆ ಹಾಗೂ ಔದ್ಯಮಿಕ ಸಾಧ್ಯತೆಗಳನ್ನು ಪರಿಚಯಿಸುವ ಉದ್ದೇಶದಿಂದ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಶ್ರೀಕೃಷ್ಣಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ ಆಯೋಜಿಸಲಾಗಿದೆ.
ನವೆಂಬರ್ 29ರಂದು ಬೆಳಿಗ್ಗೆ 10 ಗಂಟೆಗೆ ಪಲಿಮಾರು ಮಠದ ಹಿರಿಯ ಯತಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಮೇಳ ಉದ್ಘಾಟನೆಗೊಳ್ಳಲಿದೆ. ಶ್ರೀಪಡ್ರೆ ಅವರು ದಿಕ್ಸೂಚಿ ಮಾತುಗಳನ್ನಾಡಲಿದ್ದು, ಯಲ್ಲಾಪುರದ ಡಾ. ಪ್ರಸಾದ ರಾಮ ಹೆಗಡೆ ಹಾಗೂ ಮೈಸೂರಿನ ನವೀನ್ ಕುಮಾರ್ ಎಚ್.ಎಂ. ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮೂರು ದಿನಗಳ ಕಾಲ ಕೃಷಿಕರ ಜ್ಞಾನ ವಿನಿಮಯ, ತಜ್ಞರ ಉಪನ್ಯಾಸ, ನೃತ್ಯರೂಪಕ ಹಾಗೂ ನಾಟಕ ಪ್ರದರ್ಶನಗಳು ನಡೆಯಲಿವೆ. ಡಿಸೆಂಬರ್ 1ರಂದು ಸೋದೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.
ನೂರಕ್ಕೂ ಹೆಚ್ಚು ತಳಿಗಳ ಪ್ರದರ್ಶನ
ಮೇಳದಲ್ಲಿ 100ಕ್ಕೂ ಹೆಚ್ಚು ತಳಿಗಳ ಬಾಳೆಹಣ್ಣಿನ ಗೊನೆಗಳು ಹಾಗೂ 150ಕ್ಕೂ ಹೆಚ್ಚು ಬಗೆಯ ಬಾಳೆ ಸಸಿಗಳ ತಳಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಬಾಳೆಹಣ್ಣಿನಿಂದ ತಯಾರಿಸಿದ ವಿವಿಧ ಖಾದ್ಯಗಳು, ಬಾಳೆಕಾಯಿ ಹುಡಿ ಉತ್ಪನ್ನಗಳು, ಸುಕೇಳಿ ತಯಾರಿಕೆ, ಬಾಳೆನಾರಿನ ಕರಕುಶಲ ವಸ್ತುಗಳು ಹಾಗೂ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
ಇದರೊಂದಿಗೆ ಬಾಳೆಹಣ್ಣಿನ ಐಸ್ಕ್ರೀಂ, ಬಾಳೆದಿಂಡಿನಿಂದ ರೂಪಿಸಿದ ಮಂಟಪ ಕಲಾಕೃತಿ ಹಾಗೂ ಶ್ರೀಕೃಷ್ಣನ ಪ್ರತಿಮೆಯೂ ವಿಶೇಷ ಗಮನ ಸೆಳೆಯಲಿವೆ.
ಎರಡನೇ ಪರ್ಯಾಯಕ್ಕೆ ಸಜ್ಜಾಗುತ್ತಿರುವ ಶ್ರೀಗಳು
ಸೋದೆ ಮಠದ 36ನೇ ಯತಿಗಳಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ರಾಘವ ಎಂ.ಬಿ. ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಉಡುಪಿಯ ಪಾಡಿಗಾರಿನ ಶ್ರೀನಿವಾಸ ತಂತ್ರಿ ಮತ್ತು ವೇದಾವತಿ ದಂಪತಿಯ ಪುತ್ರರಾದ ಇವರು 2006ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಸೋದೆ ಶ್ರೀವಿಶ್ವೋತ್ತಮತೀರ್ಥರು ಇವರ ಆಶ್ರಮ ಗುರುಗಳು.
2012ರಿಂದ 2014ರವರೆಗೆ ಮೊದಲ ಪರ್ಯಾಯ ನಡೆಸಿದ್ದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ಇದೀಗ 2028ರಲ್ಲಿ ಎರಡನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ.












