ದಕ್ಷಿಣ ಕನ್ನಡದಲ್ಲಿ ‘ಋತು ತಾರೆ’ ಪ್ರಾಯೋಗಿಕವಾಗಿ ಜಾರಿಗೆ ಸಿದ್ಧತೆ: ಡಾ. ತಿಮ್ಮಯ್ಯ

Spread the love

ದಕ್ಷಿಣ ಕನ್ನಡದಲ್ಲಿ ‘ಋತು ತಾರೆ’ ಪ್ರಾಯೋಗಿಕವಾಗಿ ಜಾರಿಗೆ ಸಿದ್ಧತೆ: ಡಾ. ತಿಮ್ಮಯ್ಯ

ಮಂಗಳೂರು: ಮಧ್ಯ ವಯಸ್ಕ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಋತುಬಂಧ ಸಮಸ್ಯೆಗಳಿಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಋತುತಾರೆ’ ಯೋಜನೆಗೆ ದ.ಕ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 35 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಲ್ಲಿ ಋತುಬಂಧದ ಪೂರ್ವ ಮತ್ತು ನಂತರದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಅರುಪೇರಾಗುತ್ತದೆ. ಸಿಡುಕು, ಮೈಬಿಸಿ, ವಿಪರೀತ ಮೈಕೈನೋವು, ನಿದ್ದೆ ಬಾರದಿರುವುದು, ಕೆಲಸ ಮಾಡಲು ಆಸಕ್ತಿ ಇಲ್ಲದಿರುವುದು ಭಾವನಾತ್ಮ ತೊಳಲಾಟ ಮೊದಲಾದ ಸಮಸ್ಯೆಗಳ ಸಂದರ್ಭ ಉಚಿತವಾಗಿ ಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ಆರೋಗ್ಯ ಇಲಾಖೆಯು ಈ ಋತುತಾರೆ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಪ್ರಾಯೋಗಿಕವಾಗಿ ದ.ಕ. ಜಿಲ್ಲೆಯಲ್ಲಿ ಈ ಯೋಜನೆಯನ್ನು ಡಿಸೆಂಬರ್ 2ನೆ ವಾರದಲ್ಲಿ ಆರಂಭಿಸುವ ಸಾಧ್ಯತೆ ಇದ್ದು ಇದಕ್ಕಾಗಿ ಆಶಾ ಕಾರ್ಯಕರ್ತೆರಿಯರಿಗೆ ತರಬೇತಿ ನೀಡುವ ಕಾರ್ಯವನ್ನು ನಡೆಸಲಾಗುತ್ತದೆ. ತರಬೇತಿಯ ಬಳಿಕ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿ ಅಗತ್ಯ ಇರುವವರಿಗೆ ಈ ಸಂಜೀವಿನಿ ಟೆಲಿ ಕನ್ಸೆಲ್ವೆನ್ಸಿ ಮೂಲಕ ಸಮಾಲೋಚನೆಗೆ ಅವಕಾಶ ಒದಗಿಸಲಾಗುತ್ತದೆ. 100 ದಿನಗಳ ಅಭಿಯಾನದ ಮೂಲಕ ಈ ಋತುತಾರೆ ಯೋಜನೆಯ ವರದಿಯ ಆಧಾರದಲ್ಲಿ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.


Spread the love
Subscribe
Notify of

0 Comments