ಮತದಾರರ ಹಕ್ಕುಗಳ ರಕ್ಷಣೆಗೆ ಕುಂದಾಪುರದಲ್ಲಿ ಸಮಾನಮನಸ್ಕ ಸಂಘಟನೆಗಳ ಪ್ರತಿಭಟನೆ
- ವಾಹನ ಜಾಥಾ, ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆ
ಕುಂದಾಪುರ: ಮತದಾರರ ಹಕ್ಕುಗಳ ರಕ್ಷಣೆ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಖಾತರಿಪಡಿಸುವಂತೆ ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು. ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆಸುವುದು ಸೇರಿದಂತೆ ಒಂಬತ್ತು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕುಂದಾಪುರದ ನೆಹರೂ ಮೈದಾನದಿಂದ ಮಧ್ಯಾಹ್ನ ಸುಮಾರು 2 ಗಂಟೆಗೆ ಆರಂಭಗೊಂಡ ವಾಹನ ಜಾಥಾ ಟೆಕ್ಕಟ್ಟೆ, ಕೋಮೆ, ಕೋಡಿ ಹಾಗೂ ವಿನಾಯಕ ಮಾರ್ಗವಾಗಿ ಸಾಗಿತು. ಬಳಿಕ ಶಾಸ್ತ್ರಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯ ನಂತರ ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಉದ್ದೇಶಿಸಿದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸಲ್ಲಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ, ಸಹಬಾಳ್ವೆ ಕುಂದಾಪುರ, I.N.D.I.A. ಒಕ್ಕೂಟದ ವಿವಿಧ ಪಕ್ಷಗಳು, ಸಿಪಿಐ(ಎಂ), ಸಿಐಟಿಯು, ದಲಿತ ಸಂಘರ್ಷ ಸಮಿತಿ (DSS), ಮುಸ್ಲಿಂ ಒಕ್ಕೂಟ, ಕ್ರೈಸ್ತ ಸಂಘಟನೆಗಳು ಹಾಗೂ ಇತರ ಸಮಾನಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಪ್ರತಿಭಟನಾಕಾರರು ಇವಿಎಂ ಬಳಕೆಯನ್ನು ರದ್ದುಗೊಳಿಸಿ ಮತಪತ್ರಗಳ ಮೂಲಕ ಮತದಾನ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023ರ ಸೆಕ್ಷನ್ 16 ಅನ್ನು ರದ್ದುಗೊಳಿಸಬೇಕು ಹಾಗೂ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.
SIR ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು, ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಕೈಬಿಡುವುದನ್ನು ತಡೆಯಬೇಕು, ಆಕ್ಷೇಪಣೆ ಮತ್ತು ಮೇಲ್ಮನವಿಗಳಿಗೆ ಪರಿಣಾಮಕಾರಿ ಅವಕಾಶ ಕಲ್ಪಿಸಬೇಕು ಹಾಗೂ ಮತದಾರರ ದೂರುಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಅಗತ್ಯ ನೆರವು ಒದಗಿಸಬೇಕು. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಮತದಾರರ ನಂಬಿಕೆಯನ್ನು ಬಲಪಡಿಸಲು ಸೂಕ್ತ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇದೂರು ಸದಾನಂದ ಶೆಟ್ಟಿ, ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಸಿಪಿಐ(ಎಂ) ನಾಯಕ ಚಂದ್ರಶೇಖರ್, ಸಹಬಾಳ್ವೆ ಕುಂದಾಪುರದ ಅಧ್ಯಕ್ಷ ರಾಮಕೃಷ್ಣ ಹೆರಳೆ, ವಕೀಲ ಮಂಜುನಾಥ ಗಿಳಿಯಾರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ರೋಶನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೃಷ್ಣ ಪೂಜಾರಿ ಅಮಾಸೆಬೈಲು, ಸುರೇಶ್ ಶೆಟ್ಟಿ ಹೈಕಾಡಿ, ಅಶೋಕ್ ಶೆಟ್ಟಿ ಚೊರಾಡಿ, ಇಚ್ಚಿತಾರ್ಥ ಶೆಟ್ಟಿ, ರಿಯಾಜ್ ಕೋಡಿ, ಸಿಪಿಐ(ಎಂ)ನ ವಿ. ನರಸಿಂಹ ಮತ್ತು ಎಚ್. ನರಸಿಂಹ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿಗಾರ್, ಮಾಜಿ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಮತ್ತು ಅಬು ಮೊಹಮ್ಮದ್, ನಾಮನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ ಮತ್ತು ಶಶಿಧರ್ ಕೋಟೆ, ಶೇಖರ್ ಚಾತ್ರಬೆಟ್ಟು ಹಾಗೂ ಸದಾರಾಮ ಶೆಟ್ಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.













