ಪುತ್ತೂರು: ಆಟೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ – ಚಾಲಕ ವಶಕ್ಕೆ

Spread the love

ಪುತ್ತೂರು: ಆಟೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ – ಚಾಲಕ ವಶಕ್ಕೆ

ಪುತ್ತೂರು: ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರಿಗೆ ಆಟೋ ರಿಕ್ಷಾದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಟೋ ಚಾಲಕನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಸೆ.9ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದರು. ಬಳಿಕ ಪರಿಚಯದ ಬಾಲಕೃಷ್ಣ ಎಂಬವರು ಚಾಲಕರಾಗಿರುವ KA-21-B-2011 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದಲ್ಲಿ ಪುತ್ತೂರು ಕಡೆಗೆ ತೆರಳುತ್ತಿದ್ದರು.

ಈ ವೇಳೆ ಆಟೋ ಚಾಲಕ ಬಾಲಕೃಷ್ಣ ಮಾರ್ಗ ಬದಲಿಸಿ ರಿಕ್ಷಾವನ್ನು ಕುರಿಯ ಎಂಬಲ್ಲಿಗೆ ಕರೆದೊಯ್ದು ನಿಲ್ಲಿಸಿದ್ದಾನೆ. ಬಳಿಕ ಸಂತ್ರಸ್ತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 117/2026, ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 74, 75 ಮತ್ತು 64ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಬಾಲಕೃಷ್ಣನನ್ನು ಸಂಟ್ಯಾರ್–ಪರ್ಪುಂಜ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments