ಗುಣಮಟ್ಟವೇ ಉದ್ಯಮದ ಯಶಸ್ಸಿನ ಮಂತ್ರ : ಗುರ್ಮೆ ಸುರೇಶ್ ಶೆಟ್ಟಿ

Spread the love

ಗುಣಮಟ್ಟವೇ ಉದ್ಯಮದ ಯಶಸ್ಸಿನ ಮಂತ್ರ : ಗುರ್ಮೆ ಸುರೇಶ್ ಶೆಟ್ಟಿ  

ಬ್ರಹ್ಮಾವರದಲ್ಲಿ ಉಡುಪಿ ಆಹಾರ-ಉದ್ಯಮ ಮೇಳ : ದಶರುಚಿ ಸಿಂಹಾವಲೋಕನ ಸಭೆ

ಉಡುಪಿ: ಉದ್ಯಮವನ್ನು ನಮ್ಮ ತಾಯಿಯಂತೆ ಗೌರವಿಸಿ, ಪ್ರೀತಿಯಿಂದ ಮುನ್ನಡೆಸಬೇಕು. ವಿಶೇಷವಾಗಿ ಆಹಾರೋದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ಸಮಾಜದಲ್ಲಿ ಗುರುತಿಸುವಿಕೆ ಹಾಗೂ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯ. ಅಂತಹ ಉದ್ಯಮಗಳ ಕೈಹಿಡಿದು ಭಗವಂತನೂ ಆಶೀರ್ವದಿಸುತ್ತಾನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.

ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘದ ಆಶ್ರಯ ದಲ್ಲಿ ನ. 27ರಿಂದ 29ರ ವರೆಗೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾದ “ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ದಲ್ಲಿ ಶನಿವಾರ “ದಶ ರುಚಿ’ ಸಿಂಹಾವ ಲೋಕನ ಸಭೆಯಲ್ಲಿ ಅವರು ಮಾತನಾಡಿ, ಉದ್ಯಮದಲ್ಲಿ ಯಶಸ್ಸು ಸಾಧಿಸಿದವರು ಸಮಾಜದ ಇತರ ವೃತ್ತಿ ಬಾಂಧವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವ ಮನೋಭಾವ ಬೆಳೆಸಬೇಕು ಎಂದರು.

ಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರು ದಿಕ್ಕೂಚಿ ಭಾಷಣಗೈದು, ಹೊಸ ಉದ್ಯಮಿಗಳಲ್ಲಿ ಸ್ಪೂರ್ತಿ, ಆತ್ಮವಿಶ್ವಾಸ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ಕಾರ್ಯವನ್ನು ಈ ಮೇಳ ಮಾಡುತ್ತಿರುವುದು ಅಭಿನಂದನೀಯ. ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಆಸಕ್ತಿ ಹೊಂದಿರುವ ಯುವಜನರಿಗೆ ಹೊಸ ಅವಕಾಶಗಳು ಹಾಗೂ ಪ್ರೇರಣೆ ನೀಡುವ ಮಹತ್ವದ ವೇದಿಕೆಯಾಗಿ ಈ ಮೇಳ ಮೂಡಿಬಂದಿದೆ ಎಂದರು.

ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಎಚ್. ಶರಣಕುಮಾರ್ ಭಟ್ ಮಾತನಾಡಿ, ಆಹಾರ ಉದ್ಯಮದಲ್ಲಿ ಗ್ರಾಹಕರ ವಿಶ್ವಾಸ ಗಳಿಸಲು ಆಹಾರದ ಗುಣಮಟ್ಟ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಅತ್ಯಗತ್ಯ. ಈ ಅಹಾರ ಉದ್ಯಮ ಮೇಳವು ಯುವ ಉದ್ಯಮಿಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಪ್ರಧಾನ ಸಂಚಾಲಕ ಶ್ರೀಧರ ಪಿ. ಎಸ್. ಅವರು ಸಂಘದ ಸ್ಥಾಪನೆಯ ಉದ್ದೇಶ, 10 ವರ್ಷಗಳಲ್ಲಿ ಹಮ್ಮಿಕೊಂಡ ವಿವಿಧ ಚಟುವಟಿಕೆಗಳು, ಸದಸ್ಯರಿಗೆ ‘ಸಂಘದಿಂದ ದೊರೆತ ಪ್ರಯೋಜನಗಳು, ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಅವಲೋಕನ ನಡೆಸಿದರು. ಉದ್ಯಮ ಕ್ಷೇತ್ರದಲ್ಲಿ ಕಾಲಕಾಲಕ್ಕೆ ಎದುರಾಗುವ ಸವಾಲುಗಳನ್ನು ಧೈರ್ಯ ಮತ್ತು ಬದ್ಧತೆಯಿಂದ ಎದುರಿಸಿ, ಅವುಗಳನ್ನು ಮೆಟ್ಟಿನಿಂತು ಮುನ್ನಡೆದಾಗ ಮಾತ್ರ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಸಂಘಟನೆಯ ಒಗ್ಗಟ್ಟು ಪರಸ್ಪರ ಸಹಕಾರ, ನಿರಂತರ ಪ್ರಯತ್ನಗಳು ಉದ್ಯಮದ ಬೆಳವಣಿಗೆಗೆ ಪೂರಕವಾಗಬೇಕು ಎಂದರು.

ಜಿಎಸ್ಆರ್ ಹಾಗೂ ಮಯೂರ ಸಮೂಹ ಸಂಸ್ಥೆಗಳ ಸಿಎಂಡಿ ಶ್ರೀನಿವಾಸ ರಾವ್ ಗೋಪಾಡಿ, ಪಾಲ್ಘರ್ ಅಲ್ಲೆಲ್ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅಲ್ಬರ್ಟ್ ವಿಲೈಡ್ ಡಿ’ಸೋಜಾ ಅವರಿಗೆ *ಆಹಾರೋದ್ಯಮ ರತ್ನ ಪ್ರಶಸ್ತಿ’ಪ್ರದಾನ ಮಾಡಿ ಸಮ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ಹಾಸ್ಯನಟ ಟೆನ್ನಿಸ್ ಕೃಷ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಹೊಟೇಲ್ ಮಾಲಕರ ಸಂಘ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರಿ ಸಂಘ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮೈರ್ಮಾಡಿ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲದ ಉಪ ಪ್ರಾಂಶುಪಾಲ ಪ್ರೊ| ಶರತ್ ಆಳ್ವ ಎರ್ಮಾಳು, ಕುಕ್ಕೆಹಳ್ಳಿ ಜನನಿ ಫಾರ್ಮ… ಮಾಲಕ ಜ್ಯೋತಿ ಪೈ ಕಲ್ಕೂರ ಕಿಚನ್ ಇಕ್ಯೂಪ್ಮೆಂಟ್ಸ್ನ ಎಂಡಿ ರಂಜನ್ ಕಲ್ಕೂರ, ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿ ಕುತ್ಯಾರು ನವೀನ್ ಶೆಟ್ಟಿ ಹಿರಿಯ ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಕ್ಯಾಟರಿಂಗ್ ಅಸೋಸಿಯೇಶನ್ ಅಧ್ಯಕ್ಷ ನವೀನ್ ಅಮೀನ್, ರಾಜ್ಯ ಕಾರ್ಮಿಕ ಪರಿಷತ್ತು ರಾಜ್ಯಾಧ್ಯಕ್ಷ ಡಾ| ರವಿ ಶೆಟ್ಟಿ ಬೈಂದೂರು, ಕೋಟೇಶ್ವರ ಸಹನಾ ಸಮೂಹ ಸಂಸ್ಥೆಗಳ ಎಂಡಿ ಸುರೇಂದ್ರ ಶೆಟ್ಟಿ, ಜಿಲ್ಲಾ ಬೇಕರಿ ಮತ್ತು ಖಾದ್ಯ ತಯಾರಕರ ಹಾಗೂ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕೆ. ಪಿ. ಶ್ರೀಶನ್, ಗೌರವಾಧ್ಯಕ್ಷ ವಾಲ್ಟರ್ ಜೋಸೆಪ್ ಸಲ್ಲಾನ್ನ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸ್ನಾ ಕನ್ಸಿ ಹೆರಾಲ್ಡ್ ಡಿ’ಸೋಜಾ, ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಸದಸ್ಯ ನಹೀನ್ ಶೆಟ್ಟಿ ಸ್ವಾಗತಿಸಿ, ರಾಜೇಶ್ ಕೆ.ಸಿ., ಸುಮಲತಾ ಸಂಗ್ರಾಮ್ ಶೆಟ್ಟಿ ನಿರೂಪಿಸಿದರು.


Spread the love
Subscribe
Notify of

0 Comments