ಪಾಂಡೇಶ್ವರ ರೈಲ್ವೆ ಕ್ರಾಸಿಂಗ್‌ನಲ್ಲಿ ಟ್ರಕ್ ಡಿಕ್ಕಿಗೆ ರೈಲ್ವೆ ಗೇಟ್ ಮುರಿದು ಪತನ!
ಮಂಗಳೂರು: ಮಂಗಳೂರಿನ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ರೈಲ್ವೆ ಗೇಟ್ ಮುರಿದು ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೇಟ್ ದುರಸ್ತಿಗೊಳಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆದರೆ, ಘಟನೆಯ ಕುರಿತು ಸಂಪೂರ್ಣ ಮಾಹಿತಿ ತಿಳಿಯದ ಕೆಲವರು ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ಗೇಟ್ ತುಕ್ಕು ಹಿಡಿದು ಮುರಿದು ಬಿದ್ದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ತೀವ್ರ ಟ್ರಾಫಿಕ್ ಸಮಸ್ಯೆಯಿಂದಾಗಿ ಸುದ್ದಿಯಲ್ಲಿರುವ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಇದೀಗ ಗೇಟ್ ಮುರಿದು ಬಿದ್ದಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.
ಟ್ರಕ್ ಡಿಕ್ಕಿಯಿಂದ ಗೇಟ್ ಮುರಿದು ಬಿದ್ದಿದ್ದರೂ, ಅದು ತುಕ್ಕು ಹಿಡಿದು ತುಂಡಾಗಿದೆ ಎಂಬ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ನೈಜ ಕಾರಣ ತಿಳಿಯದೆ ತಪ್ಪು ಮಾಹಿತಿ ಹರಡುವ ಬದಲು, ವಾಸ್ತವಾಂಶವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.













