‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ, ‘ದಕ್ಷಿಣ ಕನ್ನಡ’ ಎಂಬ ಹೆಸರನ್ನೇ ಮುಂದುವರಿಸುವಂತೆ ಕರ್ನಾಟಕ ಸರ್ಕಾರವನ್ನು ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಈ ಬೇಡಿಕೆ ಮಂಗಳೂರು ನಗರದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವ ಮತ್ತು ಮಹತ್ವವನ್ನು ಹೊಂದಿದೆ. ಆದರೆ ‘ದಕ್ಷಿಣ ಕನ್ನಡ’ ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ 150 ವರ್ಷಕ್ಕೂ ಮೀರಿದ ಆಡಳಿತಾತ್ಮಕ ಇತಿಹಾಸವಿದೆ. ಈ ಪ್ರದೇಶವನ್ನು ಹಿಂದೆ ‘ಸೌತ್ ಕೆನರಾ’ ಅಥವಾ ‘ಸೌತ್ ಕನಾರಾ’ ಎಂದು ಕರೆಯಲಾಗುತ್ತಿತ್ತು. 1977ರ ಜನವರಿಯಲ್ಲಿ ಕರ್ನಾಟಕ ಸರ್ಕಾರವು ‘ಸೌತ್ ಕನಾರಾ’ ಹೆಸರನ್ನು ‘ದಕ್ಷಿಣ ಕನ್ನಡ’ ಎಂದು ಬದಲಾಯಿಸಿತ್ತು. ಹೀಗಾಗಿ ‘ದಕ್ಷಿಣ ಕನ್ನಡ’ ಎಂಬ ಹೆಸರು ಸುಮಾರು ಐದು ದಶಕಗಳ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಕೇಂದ್ರ ಮಂಗಳೂರು ಎಂಬ ಕಾರಣಕ್ಕೆ ಜಿಲ್ಲೆಯ ಹೆಸರನ್ನೂ ಮಂಗಳೂರಿನ ಹೆಸರಿನಿಂದಲೇ ಕರೆಯಬೇಕೆಂಬ ಆಡಳಿತಾತ್ಮಕ ಅನಿವಾರ್ಯತೆ ಇಲ್ಲ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಅನೇಕ ಪಟ್ಟಣಗಳು, ಗ್ರಾಮಗಳು ಹಾಗೂ ಐತಿಹಾಸಿಕ ಪ್ರದೇಶಗಳು ದಕ್ಷಿಣ ಕನ್ನಡದ ವಿಶಾಲ ಅಸ್ತಿತ್ವದ ಭಾಗವಾಗಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗವನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನು ರಚಿಸಿದ ನಂತರವೂ ಉಳಿದ ಜಿಲ್ಲೆಗೆ ‘ದಕ್ಷಿಣ ಕನ್ನಡ’ ಎಂಬ ಹೆಸರನ್ನೇ ಮುಂದುವರಿಸಲಾಗಿತ್ತು. ಆಡಳಿತಾತ್ಮಕ ಬದಲಾವಣೆಗಳ ನಡುವೆಯೂ ಹೆಸರು ಉಳಿದುಕೊಂಡಿರುವುದು ಅದರ ಐತಿಹಾಸಿಕ ನಿರಂತರತೆಯನ್ನು ತೋರಿಸುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.
‘ದಕ್ಷಿಣ ಕನ್ನಡ’ ಹೆಸರನ್ನು ಬದಲಾಯಿಸುವುದರಿಂದ ಐತಿಹಾಸಿಕ ದಾಖಲೆಗಳು, ಪುಸ್ತಕಗಳು, ನಕ್ಷೆಗಳು, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದಾಖಲೆಗಳು, ಕಾನೂನು ಮತ್ತು ಸಾಂಸ್ಕೃತಿಕ ಉಲ್ಲೇಖಗಳು ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳಲ್ಲಿ ಬದಲಾವಣೆ ಮಾಡುವ ಅಗತ್ಯ ಎದುರಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದನ್ನು ಸ್ವಾಗತಿಸಿರುವ ಮನವಿದಾರರು, ಈ ಪ್ರಕ್ರಿಯೆಯನ್ನು ಮಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಜಿಲ್ಲೆಯ ಎಲ್ಲ ತಾಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳ ಜನರ ಅಭಿಪ್ರಾಯವನ್ನು ಒಳಗೊಂಡಂತೆ ವ್ಯಾಪಕ ಹಾಗೂ ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಇತರ ಪ್ರಮುಖ ಪಾಲುದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
‘ಮಂಗಳೂರು ದಕ್ಷಿಣ ಕನ್ನಡದ ಹೃದಯಭಾಗವಾಗಿ ಉಳಿಯಲಿ; ದಕ್ಷಿಣ ಕನ್ನಡವು ಜಿಲ್ಲೆಯ ಹೆಮ್ಮೆಯ ಐತಿಹಾಸಿಕ ಹೆಸರಾಗಿ ಉಳಿಯಲಿ. ಇದು ಮಂಗಳೂರಿನ ವಿರುದ್ಧದ ಬೇಡಿಕೆಯಲ್ಲ. ಬದಲಾಗಿ ದಕ್ಷಿಣ ಕನ್ನಡದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಅಸ್ತಿತ್ವವನ್ನು ಸಂರಕ್ಷಿಸುವ ಪ್ರಾಮಾಣಿಕ ಪ್ರಯತ್ನ’ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬೆನೆಟ್ ಅಮ್ಮಣ್ಣ, ಪ್ರೊ. ಕೃಷ್ಣಮೂರ್ತಿ, ವಿಲಿಯಮ್ ಪಾಯ್ಸ್ ಹಾಗೂ ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದರು.













