ಕಾವೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಶೂಟೌಟ್ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಕಥೊಲಿಕ್ ಸಭಾ ಒತ್ತಾಯ
ಉಡುಪಿ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಮೂವರು ಮೃತಪಟ್ಟಿರುವ ಪ್ರಕರಣ ಕ್ರೈಸ್ತ ಸಮುದಾಯಕ್ಕೆ ತೀವ್ರ ಆಘಾತ ಉಂಟು ಮಾಡಿದ್ದು ಇದರ ಕುರಿತು ರಾಜ್ಯ ಸರಕಾರ ಸೂಕ್ತವಾದ ತನಿಖೆ ನಡೆಸಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ನಡೆಸಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ಶಿರ್ವ ಆಗ್ರಹಿಸಿದ್ದಾರೆ.
ಹನೂರು ತಾಲೂಕಿನ ನಿವಾಸಿಗಳಾದ ಆಂಟನಿ ಸ್ವಾಮಿ (50), ಜಾನ್ ರೋಸ್ ಪೀಟರ್ (42) ಹಾಗೂ ಆಂಟನಿ ಕುಮಾರ್ (33) ಅವರು ಶನಿವಾರ ಮುಂಜಾನೆ ಕಾವೇರಿ ವನ್ಯಜೀವಿ ವಿಭಾಗದ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಗೆ ಬಲಿಯಾಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಅವರಿಂದ ಯಾವುದೇ ರೀತಿಯ ಪ್ರಮಾದಗಳಾಗಿದ್ದರೂ ಕೂಡ ಗುಂಡಿಕ್ಕಿ ಹತ್ಯೆ ಮಾಡಿರುವುದು ಸಮರ್ಥನೀಯವಲ್ಲ. ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ, ಬೇಟೆ, ಬೇಟೆಯಾಡುವುದು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಕ್ರೈಸ್ತ ಸಮುದಾಯ ಬೆಂಬಲಿಸುವುದಿಲ್ಲ. ಅದೇ ರೀತಿ ಅವರುಗಳಿಂದ ನಡೆದ ತಪ್ಪಿಗೆ ಗುಂಡಿಕ್ಕಿ ನರಮೇಧ ನಡೆಸಿರುವುದು ಕೂಡ ಸರಿಯಾದ ಕ್ರಮವಲ್ಲ. ಅರಣ್ಯಾಧಿಕಾರಿಗಳು ಮತ್ತು ಸಿಬಂದಿ ನಡೆದುಕೊಂಡ ಕ್ರಮವನ್ನು ಕ್ಷಮಿಸಲು ಸಾಧ್ಯವಿಲ್ಲ.
ಘಟನೆಯ ಸತ್ಯಾಂಶವನ್ನು ಹೊರತರುವುದರೊಂದಿಗೆ ಮೃತ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ಘಟನೆಯ ಕುರಿತು ರಾಜ್ಯ ಸರಕಾರ ಕೂಡಲೇ ಉನ್ನತ ಮಟ್ಟದ ತನಿಖೆ ಆದೇಶ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಮೃತರ ಕುಟುಂಬದವರಿಗೆ ಅರಣ್ಯ ಇಲಾಖೆಯಿಂದ ಗರಿಷ್ಠ ಪರಿಹಾರ ನೀಡಬೇಕು ಮತ್ತು ಪ್ರತಿ ಕುಟುಂಬದ ಒರ್ವ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡುವಂತೆ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.













