ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಸಿಎಂ ಡಿಕೆಶಿ ನಿರ್ಧಾರ ಸ್ವಾಗತಾರ್ಹ: ಅನ್ವರ್ ಸಾದತ್

Spread the love

ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಸಿಎಂ ಡಿಕೆಶಿ ನಿರ್ಧಾರ ಸ್ವಾಗತಾರ್ಹ: ಅನ್ವರ್ ಸಾದತ್

ಮಂಗಳೂರು: ರಾಜ್ಯ ಸರಕಾರದ ಮುಂದಿನ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಸ್ವಾಗತಿಸಿದ್ದಾರೆ.

ಆಡಳಿತ ಯಂತ್ರವನ್ನು ಜನಸಾಮಾನ್ಯರ ಬಾಗಿಲಿಗೆ ತಲುಪಿಸುವ ಈ ಕ್ರಮವು, ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ದಿಕ್ಕಿನಲ್ಲಿ ಒಂದು ಧನಾತ್ಮಕ ಹೆಜ್ಜೆಯಾಗಲಿ ಎಂದು ಅವರು ಹಾರೈಸಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದ ಈ ಮಹತ್ವದ ಸಂಪುಟ ಸಭೆಯು ಕೇವಲ ಔಪಚಾರಿಕ ಸಭೆಯಾಗದೆ, ಈ ಭಾಗದ ಜನರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ವೇದಿಕೆಯಾಗಲಿ ಎಂದು ನಾವು ಆಶಿಸುತ್ತೇವೆ. ಈ ಹಿಂದೆ ಜಿಲ್ಲೆಯ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಉಳಿದಿರುವುದು ದುರದೃಷ್ಟಕರ ಎಂದಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಿರುವ ಸಂಪುಟ ಸಭೆಯು ಕೇವಲ ಔಪಚಾರಿಕವಾಗದೆ, ಕರಾವಳಿಯ ವಿಶೇಷ ಪರಿಗಣನೆಗೆ ಅಡಿಗಲ್ಲು ಹಾಕುವ ಗಂಭೀರ ಸಭೆಯಾಗಬೇಕು ಮತ್ತು ಕರಾವಳಿಯ ಜನರ ಭವಿಷ್ಯ ರೂಪಿಸುವ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಪಕ್ಷವು ಆಗ್ರಹಿಸುತ್ತದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ಪುತ್ತೂರು ಜಿಲ್ಲಾ ರಚನೆ, ರಸ್ತೆ ಅಭಿವೃದ್ಧಿ, ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ, ಮೂಲಸೌಕರ್ಯ ಮತ್ತು ಕೈಗಾರಿಕೆಗಳ ಸ್ಥಾಪನೆ, ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮೀನುಗಾರರ ದಶಕಗಳ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧತೆ ತೋರಬೇಕು, ಕೆಂಪು ಕಲ್ಲು ಮತ್ತು ಮರಳು ನೀತಿಯಲ್ಲಿನ ಗೊಂದಲಗಳ ನಿವಾರಣೆ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಅಕ್ರಮ ಸಕ್ರಮ ಮತ್ತು 94ಸಿ ಅರ್ಜಿ ವಿಲೇವಾರಿಗೆ ಶೀಘ್ರವಾಗಿ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಡಿ ಕೆ .ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಮ್ಮ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಎಂದು ಹೇಳಿದ್ದರು. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಭೂ ಗ್ಯಾರಂಟಿ ಜಾರಿಗೆ ತರಲು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಭೆ ನಡೆಸುವ ಮೂಲಕ ಕರಾವಳಿಯ ನಾಡಿಮಿಡಿತ ವನ್ನು ಅರ್ಥಮಾಡಿಕೊಂಡು, ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬುದು ಜಿಲ್ಲೆಯ ಜನರ ವಿಶ್ವಾಸವಾಗಿದೆ.

ಈ ಅವಕಾಶವನ್ನು ಬಳಸಿಕೊಂಡು ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅನ್ವರ್ ಸಾದತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments