ಮೈಸೂರಿಗೆ ರೈಲ್ವೇ ವಿಭಾಗ ನೀಡುವುದಕ್ಕೆ ತೀವ್ರ ವಿರೋಧ: ಪಿ.ವಿ. ಮೋಹನ್
ಮಂಗಳೂರು: ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ಆಡಳಿತಾತ್ಮಕವಾಗಿ ಬೇರ್ಪಡಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಮಂಗಳೂರಿಗೆ ಸಿಗಬೇಕಿದ್ದ ಪ್ರತ್ಯೇಕ ರೈಲ್ವೇ ವಿಭಾಗವನ್ನು ಮೈಸೂರಿಗೆ ನೀಡಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಹೇಳಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಸೇರಿದಂತೆ ಕರಾವಳಿ ಭಾಗದಿಂದ ರೈಲ್ವೇ ಇಲಾಖೆಗೆ ವಾರ್ಷಿಕ ಸುಮಾರು ₹1,100 ಕೋಟಿ ಆದಾಯ ಬರುತ್ತಿದೆ. ಕೊಂಕಣ ರೈಲ್ವೇ, ಮಂಗಳೂರು–ಹಾಸನ ರೈಲು ಸಂಪರ್ಕ ಹಾಗೂ ಮಂಗಳೂರು ಬಂದರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿದ್ದರೂ, ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ನೀಡದೆ ಮೈಸೂರಿಗೆ ನೀಡಿರುವುದು ಅನ್ಯಾಯ ಎಂದು ಆರೋಪಿಸಿದರು.
ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗಕ್ಕಾಗಿ ಕಳೆದ 10–15 ವರ್ಷಗಳಿಂದ ಧರಣಿ, ರೈಲು ತಡೆ ಹಾಗೂ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಹೋರಾಟಗಳನ್ನು ನಡೆಸಲಾಗಿದೆ. ಈ ಕುರಿತು ಸಂಸತ್ತಿನಲ್ಲಿಯೂ ಚರ್ಚೆಯಾಗಿದೆ. ಆದರೂ ಮಂಗಳೂರು ಜನರ ಅಭಿಪ್ರಾಯ ಪಡೆಯದೆ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದರು.
“ನಾವು ಮೈಸೂರು ಅಥವಾ ಪಾಲಕ್ಕಾಡ್ ವಿರುದ್ಧವಲ್ಲ. ಮಂಗಳೂರಿನ ಹಕ್ಕನ್ನು ಕೇಳುತ್ತಿದ್ದೇವೆ. ಈ ವಿಚಾರ ಮುಂದಿನ ದಿನಗಳಲ್ಲಿ ಚುನಾವಣೆಯ ಪ್ರಮುಖ ವಿಷಯವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಪಿ.ವಿ. ಮೋಹನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಶುಭೋದಯ ಆಳ್ವ, ಹೊನ್ನಯ್ಯ, ಟಿ.ಕೆ. ಸುಧೀರ್, ನವಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.













