ಡಿಸಿ ಮನ್ನಾ ಸಮಸ್ಯೆಗೆ ಶೀಘ್ರವೇ ಪರಿಹಾರ: ದಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ಮಂಗಳೂರು: ದ.ಕ.ಜಿಲ್ಲೆಯ ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿ ತಾಲೂಕು ಮಟ್ಟದಲ್ಲಿ ಚರ್ಚೆ ನಡೆದಿದೆ. ಸದ್ಯ ಲಭ್ಯವಿರುವ 190 ಎಕರೆ ಡಿಸಿ ಮನ್ನಾ ಭೂಮಿಯನ್ನು ನಿವೇಶನ ರಹಿತರಿಗೆ ಆದ್ಯತೆಯ ನೆಲೆಯಲ್ಲಿ ಹಂಚಿಕೆ ಮಾಡುವುದು ಹಾಗೂ ಅಗತ್ಯವಿರುವಲ್ಲಿ ಭೂಮಿ ಖರೀದಿ ಮಾಡಿ ಹಂಚಿಕೆ ಮಾಡುವ ಕುರಿತಂತೆ ಸರಕಾರದ ಹಂತ ದಲ್ಲಿ ಇತ್ಯರ್ಥವಾಗಬೇಕಿದೆ. ಈ ಬಗ್ಗೆ ಕಂದಾಯ ಸಚಿವರ ಜತೆಗಿನ ಸಭೆಯಲ್ಲೂ ಚರ್ಚೆ ಆಗಿ ಶೀಘ್ರವೇ ಪರಿಹಾರ ವಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಉರ್ವಾಸ್ಟೋರ್‌ನ ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ದ.ಕ. ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ದಲಿತ ಮುಖಂಡ ರಮೇಶ್ ಕೋಟ್ಯಾನ್ ಅವರು ವಿಷಯ ಪ್ರಸ್ತಾವಿಸಿ ಡಿಸಿ ಮನ್ನಾ ಭೂಮಿ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದರಲ್ಲದೆ, ಡಿಸಿ ಮನ್ನಾ ಭೂಮಿ ಹಚಿಕೆಗೆ ಸಂಬಂಧಿಸಿ 2017ರಲ್ಲಿ ನಡೆದ ದಲಿತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ 10 ಸೆಂಟ್ಸ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೃಷಿಗಾಗಿ ಕನಿಷ್ಟ 1 ಎಕರೆ ಕೃಷಿ ಭೂಮಿ ನೀಡುವ ಬೇಡಿಕೆ ಸಲ್ಲಸಲಾಗಿತ್ತು. ಹಲವು ಜಿಲ್ಲಾಧಿಕಾರಿಗಳು ಬಂದು ಹೋದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಈ ಬಾರಿಯಾದರೂ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ 7377 ಕೆರೆ ಡಿಸಿ ಮನ್ನಾ ಭೂಮಿಯ ಹಂಚಿಕೆಯಾಗಿದೆ. ಭೂಮಿ ಹಾಗೂ ನಿವೇಶನಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ದಲಿತರಿಂದ 2222 ಅರ್ಜಿಗಳು ಬಂದಿದ್ದು, 1977 ಮಂದಿ ಕೃಷಿಗಾಗಿ ಭೂಮಿಯನ್ನು ಕೋರಿದ್ದಾರೆ. ಮಂಗಳೂರಿನ 245 ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬಂದಿರುವ ಅರ್ಜಿಗಳಲ್ಲಿ 1268 ಅರ್ಜಿಗಳು ಭೂರಹಿತರದ್ದಾಗಿದೆ. ಉಳುಮೆಗೆ ಭೂಮಿ ನೀಡಿದರೆ ಅವರ ಜೀವನಕ್ಕೆ ಸಹಕಾರ ಆಗಲಿದೆ ಎಂಬುದು ನನ್ನ ಅನಿಸಿ ಕೆಯೂ ಆಗಿದೆ. ಆ ಕಾರಣ ಭೂ ರಹಿತರಿಗೆ ಪ್ರಥಮ ಆದ್ಯತೆ ನೆಲೆಯಲ್ಲಿ ಭೂಮಿಯನ್ನು ಒದಗಿಸುವುದು ಅಗತ್ಯವಾ ಗಿದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕಳೆದ ಸೆಪ್ಟಂಬರ್ ತಿಂಗಳಿನಂದಲೇ ಈ ಬಗ್ಗೆ ಸರಕಾರಕ್ಕೆ ಪತ್ರ ವ್ಯವಹಾರ ನಡೆಸುತ್ತಿರುವುದಾಗಿ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
ಅತಿಕ್ರಮಣ ಭೂಮಿ ವಶಪಡಿಸಿಕೊಳ್ಳಿ
ಕೆಲವೆಡೆ ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗಿದ್ದು, ಅದನ್ನು ವಶಪಡಿಸಿಕೊಳ್ಳಬೇಕು ಅಥವಾ ಪರ್ಯಾಯ ಭೂಮಿ ಒದಗಿಸಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.
ದಲಿತೇತರರು ಡಿಸಿ ಮನ್ನಾ ಭೂಮಿಯನ್ನು ಅತಿಕ್ರಮಣ ಮಾಡುವಂತಿಲ್ಲ. ಅಂತಹ ಪ್ರಕರಣಗಳಿದ್ದಲ್ಲಿ ತೆರವಿಗೆ ಕ್ರಮ ವಹಿಸಲಾಗುವುದು. ಡಿಸಿ ಮನ್ನಾ ಜಾಗದಲ್ಲಿ ಸರಕಾರಿ ಸಾರ್ವಜನಿಕ ಉದ್ದೇಶದ ಕಟ್ಟಡಗಳಿದ್ದರೆ ಹಾಗೂ ಸಭಾಭವನದಂತಹ ಕಟ್ಟಡಗಳ ನಿರ್ಮಾಣವಾಗಿದ್ದರೆ ಬದಲಿಗೆ ಬೇರೆಡೆ ಜಾಗ ನಿಗದಿ ಪಡಿಸಬಹುದು. ಈ ನಿಟ್ಟಿನಲ್ಲಿ ಮೂರು ಹಂತದಲ್ಲಿ ಕ್ರಮ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಡಿಸಿ ಮನ್ನಾ ಭೂಮಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಲೀಸ್‌ಗೆ ನೀಡಲಾ ಗಿದ್ದು, ಅದನ್ನು ವಾಪಾಸು ಪಡೆಯುವಂತೆ ದಲಿತ ನಾಯಕರು ಒತ್ತಾಯಿಸಿದಾಗ, ಪರಿಶೀಲನೆ ಮಾಡಿ ಕ್ರಮ ವಹಿಸು ವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಡಿಸಿಆರ್‌ಇ ಘಟಕಕ್ಕೆ ಮೂಲಭೂತ ಸೌಕರ್ಯಕ್ಕೆ ಆಗ್ರಹ
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಜಿಲ್ಲಾ ಮಟ್ಟದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)ಕ್ಕೆ ಬಲ ತುಂಬಲಾಗಿದ್ದರೂ ಮೂಲಭೂತ ಸೌಕರ್ಯ ಒದಗಿಸದ ಕಾರಣ ತೊಂದರೆಯಾಗುತ್ತಿದೆ. ಇತ್ತ ಕೆಲವೆಡೆ ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಅಮಲ ಜ್ಯೋತಿ ಸೇರಿದಂತೆ ದಲಿತ ನಾಯಕರನೇಕರು ದೂರಿದರು.
ಈ ಸಂದರ್ಭ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮಾತನಾಡಿ, ಎಸ್‌ಸಿ ಎಸ್‌ಟಿಗಳಿಗೆ ನಮ್ಮಲ್ಲೇ ಮೊದಲು ಡಿಸಿಆರ್ ಪೊಲೀಸ್ ಠಾಣೆ ಮಾಡಲಾಗಿದೆ. ಆರು ತಿಂಗಳು ಮಾತ್ರವೇ ಆಗಿದ್ದು, ಸುಧಾರಣೆ ಆಗಲು ಕೆಲ ಸಮಯ ಬೇಕಾಗು ತ್ತದೆ. ಸಿಬ್ಬಂದಿ ಕೊರತೆ ಇದೆ. ಹಾಗೆಂದು ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ಪ್ರಕರಣ ಪಡೆಯುವುದನ್ನು ನಿಲ್ಲಿಸ ಲಾಗಿಲ್ಲ. ತಮ್ಮ ವ್ಯಾಪ್ತಿಯ ಠಾಣೆಯಲ್ಲಿಯೇ ದೂರು ನೀಡಬಹುದು. ಡಿಸಿಆರ್ ಘಟಕ ಹತ್ತಿರ ಇರುವವರು ಅಲ್ಲಿಯೂ ತಮ್ಮ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟದಡಿ ಸ್ವಚ್ಛತಾ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗು ತ್ತಿದ್ದು, ತಿಂಗಳಿಗೆ 2000 ರೂ.ಗಳೂ ಸಿಗುವುದಿಲ್ಲ. ಈ ವ್ಯವಸ್ಥೆಯನ್ನು ಬದಲಿಸಬೇಕು ಎಂದು ಶೇಖರ ಲಾಯಿಲ ಅವರು ಆಗ್ರಹಿಸಿದಾಗ, ಇದು ಸ್ವ ಇಚ್ಛೆಯಿಂದ ಬಂದು ನಡೆಸುವ ಕಾರ್ಯ. ಯಾರಿಗೂ ಒತ್ತಡವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ಕಾವೂರಿನಲ್ಲಿ 1.26 ಎಕರೆ ಡಿಸಿ ಮನ್ನಾ ಭೂಮಿ ಅತಿಕ್ರಮಣ ತೆರವುಗೊಳಿಸುವಂತೆ ದಲಿತ ನಾಯಕ ಅಶೋಕ್ ಕೊಂಚಾಡಿಯವರು ಆಗ್ರಹಿಸಿದರೆ, ಉಳ್ಳಾಲದಲ್ಲಿ 1.03 ಎಕರೆ ಡಿಸಿ ಮನ್ನಾ ಭೂಮಿ ತೆರವಿಗೆ ಕಳೆದ ನಾಲ್ಕು ವರ್ಷದಿಂದ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ಗಿರೀಶ್ ಕುಮಾರ್ ಪ್ರಸ್ತಾವಿಸಿದರು.
ಪೌರ ಕಾರ್ಮಿಕರಿಗೆ ನಗದುರಹಿತ ವಿಮಾ ಸೌಲಭ್ಯ ಸೇರಿದಂತೆ ಸಮಸ್ಯೆಗಳ ಬಗ್ಗೆ ಮುಖಂಡ ಎಸ್.ಪಿ. ಆನಂದ್ ಅವರು ಪ್ರಸ್ತಾವಿಸಲು ಮುಂದಾದಾಗ ಶೀಘ್ರದಲ್ಲಿಯೇ ಪೌರ ಕಾರ್ಮಿಕರ ಸಭೆಯನ್ನು ಪ್ರತ್ಯೇಕವಾಗಿ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಪ್ರೇಮನಾಥ್ ಬಳ್ಳಾಲ್‌ಬಾಗ್, ಜಗದೀಶ್, ಚಂದ್ರಕುಮಾರ್ ಸೇರಿದಂತೆ ಹಲವು ನಾಯಕರು ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಜಿ.ಪಂ. ಸಿಇಒ ವಿನಾಯಕ ಕರ್ಭಾರಿ, ಡಿಸಿಎಫ್ ರವಿಶಂಕರ್, ಡಿಸಿಪಿ ಮಿಥುನ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಹೇಮಲತಾ, ಡಿಸಿಆರ್‌ಇ ಎಸ್ಪಿ ಸೈಮನ್, ಮನಪಾ ಆಯುಕ್ತ ರಾಹುಲ್ ಪಾಂಡೆ, ಎಸಿ ಮೀನಾಕ್ಷಿ ಆರ್ಯ ಉಪಸ್ಥಿತರಿದ್ದರು.
6 ತಿಂಗಳಿನಿಂದ ಆದಿವಾಸಿಗಳಿಗೆ ಫುಡ್ ಕಿಟ್ ಬಂದಿಲ್ಲ
ದ.ಕ. ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ನೀಡುತ್ತಿರುವ ಆಹಾರ ಕಿಟ್ ಕಳೆದ ಆರು ತಿಂಗಳಿನಿಂದ ಬಂದಿಲ್ಲ ಎಂದು ದಲಿತ ಮುಖಂಡೆಯೊಬ್ಬರು ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ರಾಜ್ಯ ಮಟ್ಟದ ಟೆಂಡರ್ ವ್ಯವಸ್ಥೆ ಆಗಿರುವ ಕಾರಣ ವಿಳಂಬವಾಗಿದೆ. ಶೀಘ್ರದಲ್ಲೇ ವ್ಯವಸ್ಥೆ ಆಗಲಿದೆ. ಆಹಾರ ಕಿಟ್ ನೀಡಲು ವಿಳಂಬವಾಗಿರುವುದು ದುರದೃಷ್ಟಕರ. ಮುಂದೆ ಈ ರೀತಿ ಆಗದ ಹಾಗೆ ಕ್ರಮ ವಹಿಸಲಾಗುವುದು ಎಂದರು.
ಅಂಬೇಡ್ಕರ್ ಸರ್ಕಲ್: ತಿಂಗಳೊಳಗೆ ಕ್ರಿಯಾ ಯೋಜನೆ
ಮಂಗಳೂರು ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ವೃತ್ತ (ಹಿಂದಿನ ಜ್ಯೋತಿ ಟಾಕೀಸ್ ಬಳಿ) ನಿರ್ಮಾಣ ಮಾಡುವ ಉದ್ದೇಶಕ್ಕೆ ಅನುದಾನ ಇರಿಸಿ, ಶಿಲಾನ್ಯಾಸ ನೆರವೇರಿದ್ದರೂ ಇನ್ನೂ ವೃತ್ತ ನಿರ್ಮಾಣ ವಾಗಿಲ್ಲ. ಇಚ್ಚಾಶಕ್ತಿಯ ಕೊರತೆಯಿಂದ ಇದು ಬಾಕಿ ಆಗಿದೆ ಎಂದು ದಲಿತ ಮುಖಂಡರಾದ ರಮೇಶ್ ಕೋಟ್ಯಾನ್, ರಘು ಎಕ್ಕಾರು, ಜಗದೀಶ್ ಪಾಂಡೇಶ್ವರ ಸೇರಿದಂತೆ ದಲಿತ ಮುಖಂಡರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಯಾವ ರೀತಿಯಲ್ಲಿ ವೃತ್ತ ನಿರ್ಮಾಣ ಮಾಡಬೇಕೆಂಬ ಬಗ್ಗೆ ಒಂದು ತಿಂಗಳೊಳಗೆ ಕ್ರಿಯಾ ಯೋಜನೆ ತಯಾರಿಸಿ ಟೆಂಡರ್ ಆಗಲಿದೆ ಎಂದು ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ತಿಳಿಸಿದರು.













