ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ : ಎಂ.ಆರ್. ಪೂವಮ್ಮ
ಮಂಗಳೂರು: ಅಂತಾರಾಷ್ಟ್ರೀಯ, ವಿಶ್ವ ಮಟ್ಟದಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ ಇದ್ದು, ಉಳಿದ ರಾಜ್ಯಗಳ ಮಾದರಿಯಲ್ಲಿ ತಕ್ಷಣ ಹೆಚ್ಚಿಸಬೇಕು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಆಗ್ರಹಿಸಿದ್ದಾರೆ.
ಏಷ್ಯನ್ ಗೇಮ್ಸ್ ನ 400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು, ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹರಿಯಾಣ, ಪಂಜಾಬ್ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ 3ರಿಂದ 4 ಕೋಟಿ ರು. ನಗದು ಬಹುಮಾನ ಹಾಗೂ ಡಿವೈಎಸ್ಪಿ ಶ್ರೇಣಿಯ ಉನ್ನತ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಚಿನ್ನದ ಪದಕಕ್ಕೆ ನೀಡುತ್ತಿರುವ ಮೊತ್ತ ಕೇವಲ 35 ಲಕ್ಷ ರು. ಮಾತ್ರ. ಈ ತಾರತಮ್ಯವನ್ನು ಸರಿಪಡಿಸಿ ಕರ್ನಾಟಕದ ಕ್ರೀಡಾಪಟುಗಳಿಗೆ ಅರ್ಹ ಗೌರವ ಮತ್ತು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ತರ ರಾಜ್ಯಗಳ ಅಥ್ಲೀಟ್ಗಳು ಪದಕ ಗೆದ್ದ ತಕ್ಷಣ ಅವರ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರು ಕರೆ ಮಾಡಿ ಅಭಿನಂದಿಸುತ್ತಿದ್ದರು. ಆದರೆ ಕಳೆದ 23 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕೆ ಹಿರಿಮೆ ತಂದರೂ, ಈಗ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರೂ ಆ ಕ್ಷಣದಲ್ಲಿ ರಾಜ್ಯ ಸರ್ಕಾರದಿಂದ ಒಂದೂ ಅಭಿನಂದನೆಯ ಕರೆ ಬರಲಿಲ್ಲ. ಇತರ ರಾಜ್ಯದ ಕ್ರೀಡಾಪಟುಗಳು ‘ನಿಮ್ಮ ರಾಜ್ಯದಿಂದ ಯಾರು ಕರೆ ಮಾಡಿದರು?’ ಎಂದು ಕೇಳಿದಾಗ ಉತ್ತರಿಸಲಾಗದೆ ತೀವ್ರ ನಿರಾಶೆಯಾಯಿತು. ಭಾರತಕ್ಕೆ ಮರಳಿದ ಮೇಲಷ್ಟೇ ನಿನ್ನೆ ಸಿಎಂ ಡಿಕೆ ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಕರೆ ಮಾಡಿ ಮಾತನಾಡಿದರು ಎಂದು ಎಂ.ಆರ್.ಪೂವಮ್ಮ ತಮ್ಮ ನೋವು ತೋಡಿಕೊಂಡರು.
ಪಂದ್ಯದ ಅನುಭವ ಹಂಚಿಕೊಂಡ ಪೂವಮ್ಮ, ಕಳೆದ ಏಷ್ಯನ್ ಗೇಮ್ಸ್ನಲ್ಲಿ ನಮಗೆ ಬೆಳ್ಳಿ ಪದಕ ಸಿಕ್ಕಿತ್ತು. ಹೀಗಾಗಿ ಈ ಬಾರಿ ‘ಮಾಡು ಇಲ್ಲವೇ ಮಡಿ’ ತಂತ್ರದೊಂದಿಗೆ ಕಣಕ್ಕಿಳಿದು ಚಿನ್ನ ಗೆಲ್ಲಲೇಬೇಕೆಂಬ ದೃಢ ನಿರ್ಧಾರ ಮಾಡಿದ್ದೆವು. ಬಹ್ರೇನ್ ಹಾಗೂ ಚೀನಾ ತಂಡಗಳ ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದೆವು. ಅಥ್ಲೆಟಿಕ್ ಮೈದಾನದಲ್ಲಿ ರಾಷ್ಟ್ರಗೀತೆ ಮೊಳಗಿದ ಕ್ಷಣ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.













