ಸಂವಿಧಾನ ಮತ್ತು ಮಾನವೀಯ ಮೌಲ್ಯಗಳ ರಕ್ಷಣೆಗಾಗಿ ಬೀದಿಗಿಳಿದು ಹೋರಾಡುವ ಕಾಲ ಬಂದಿದೆ: ಪ್ರಕಾಶ್ ರಾಜ್
ಉಡುಪಿ: ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವುದಕ್ಕಿಂತ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯ ಹೆಚ್ಚಾಗಿದೆ. ಸಂವಿಧಾನ ಮತ್ತು ಮಾನವೀಯ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜನರು ಸಹನೆ ಹಾಗೂ ಬದ್ಧತೆಯಿಂದ ಹೋರಾಟ ನಡೆಸಬೇಕು. ಇದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದಂತಿದ್ದು, ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕಾದ ಸಮಯ ಬಂದಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕರೆ ನೀಡಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಶನಿವಾರ ಉಡುಪಿ ಮಿಷನ್ ಕಂಪೌಂಡ್ನ ಯುಬಿಎಂಸಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸ್ನೇಹ ಸಮಾವೇಶದಲ್ಲಿ ‘ಮಾನವ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇಶದ ಆಡಳಿತ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಜನರಿಗೆ ತಾಳ್ಮೆಯಿಂದ ಮನವರಿಕೆ ಮಾಡಿಕೊಡಬೇಕು. ಪ್ರಸ್ತುತ ಆಡಳಿತದಲ್ಲಿ ಕರಾವಳಿಯ ಪರಿಸ್ಥಿತಿ ಹದಗೆಟ್ಟಿದ್ದು, ಆರ್ಥಿಕತೆ ಕುಸಿಯುತ್ತಿದೆ ಮತ್ತು ಯುವಜನರ ಭವಿಷ್ಯಕ್ಕೆ ಧಕ್ಕೆಯಾಗಿದೆ. ಈ ವಿಚಾರಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಜನಜಾಗೃತಿ ಹಾಗೂ ಹೋರಾಟ ನಡೆಸಬೇಕು. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಜಿಲ್ಲೆಗಳಿಗೆ ತೆರಳಿ ಈ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಪ್ರಸ್ತುತ ರಾಜಕೀಯ ಪಕ್ಷಗಳಿಗಿಂತ ಜನಪರವಾಗಿ ಮಾತನಾಡುವ ಧ್ವನಿಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸುವ ಪ್ರಯತ್ನಗಳ ಬಗ್ಗೆ ಚರ್ಚಿಸುವ ಮೊದಲು, ಅವರು ಸಂವಿಧಾನವನ್ನು ರಚಿಸಿದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಭಾರತ ಮತ್ತೆ ದಬ್ಬಾಳಿಕೆಯ ವ್ಯವಸ್ಥೆಯ ಕೈಗೆ ಸಿಲುಕಬಾರದು ಎಂಬ ಆಶಯದಿಂದ ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ ಇಂದು ಅದೇ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಕಾಶ್ ರಾಜ್ ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು. ದೇಶದ ಜನರ ಬದುಕು ಮತ್ತು ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ. ಅಲ್ಪಸಂಖ್ಯಾತರಿಗೆ ನಿರಂತರವಾಗಿ ತೊಂದರೆ ಹಾಗೂ ಕಿರುಕುಳ ನೀಡಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಅವರು ದೂರಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಜಗತ್ತಿನ ಅನೇಕ ದೇಶಗಳಲ್ಲಿ ಅಲ್ಪಸಂಖ್ಯಾತರು ಹಾಗೂ ಮೂಲನಿವಾಸಿಗಳು ನಿರಂತರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಹೋರಾಟ ನಡೆಸುವ ಮೂಲಕವೇ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಲ್ಪಸಂಖ್ಯಾತರು ಸರ್ಕಾರಿ ಸೌಲಭ್ಯಗಳಿಗಾಗಿ ನಿರಂತರ ಹೋರಾಟ ನಡೆಸುವುದರ ಜೊತೆಗೆ ತಮ್ಮ ಸಮುದಾಯದೊಳಗೂ ಆಂತರಿಕ ಬದಲಾವಣೆಗಳಿಗೆ ಮುಂದಾಗಬೇಕು. ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ಮೂಲಕವೇ ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು.
ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಮುಹಮ್ಮದ್ ಯಾಸೀನ್ ಮಲ್ಪೆ ಆಶಯ ಭಾಷಣ ಹಾಗೂ ಅಭಿನಂದನಾ ಮಾತುಗಳನ್ನಾಡಿ, ದೇಶದ ಒಳಿತು ಎಲ್ಲರ ಒಳಿತಿನೊಂದಿಗೆ ಬೆಸೆದುಕೊಂಡಿದೆ. ದೇಶದ ವಿನಾಶವು ಪ್ರತಿಯೊಬ್ಬರಿಗೂ ಹಾನಿ ಉಂಟುಮಾಡುತ್ತದೆ. ವಿವಿಧ ಧರ್ಮಗಳ ಜನರು ಒಟ್ಟಾಗಿ ಬದುಕುತ್ತಿರುವ ವೈವಿಧ್ಯತೆಯೇ ಭಾರತದ ಬುನಾದಿಯಾಗಿದೆ. ಈ ಬುನಾದಿ ಗಟ್ಟಿಯಾಗಿರುವವರೆಗೆ ದೇಶ ಬಲಿಷ್ಠವಾಗಿರುತ್ತದೆ. ಪ್ರಜಾಪ್ರಭುತ್ವದ ಅಡಿಪಾಯ ದುರ್ಬಲಗೊಂಡರೆ ದೇಶವೂ ದುರ್ಬಲವಾಗುತ್ತದೆ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಿ ಬೆಳೆಸುವುದು ಹಾಗೂ ಅವುಗಳನ್ನು ನಾಶಪಡಿಸುವ ಪ್ರಯತ್ನಗಳ ವಿರುದ್ಧ ಜಾಗೃತಿ ಮೂಡಿಸುವುದು ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸಿವೆ. ಇದರ ಪರಿಣಾಮವಾಗಿ ಒಂದೇ ಪರಿಸರದಲ್ಲಿ ವಾಸಿಸುವ ಜನರ ನಡುವೆ ಸ್ನೇಹ ಸಂಬಂಧಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಪರಸ್ಪರರ ಹೃದಯಗಳಲ್ಲಿ ದ್ವೇಷ ಮತ್ತು ಅಪನಂಬಿಕೆಯ ಗೋಡೆಗಳು ನಿರ್ಮಾಣವಾಗಿವೆ. ಈ ದ್ವೇಷದ ವಾತಾವರಣದಲ್ಲಿ ದೇಶದ ಸಂಪನ್ಮೂಲಗಳ ಮಾರಾಟ, ಭ್ರಷ್ಟಾಚಾರ, ಆರ್ಥಿಕ ವ್ಯವಸ್ಥೆಯ ಕುಸಿತ ಹಾಗೂ ಪ್ರಜಾಪ್ರಭುತ್ವದ ಸ್ತಂಭಗಳನ್ನು ದುರ್ಬಲಗೊಳಿಸುವ ಬೆಳವಣಿಗೆಗಳು ಜನರ ಗಮನಕ್ಕೆ ಬರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗರ್ಫೂ, ಉಡುಪಿ ಜಿಲ್ಲಾ ವೆಲ್ಫೇರ್ ಫೋರಂ ಯುಎಇಯ ಎಂ.ಇ. ಮುಳೂರು, ಉದ್ಯಮಿ ಕರುಣಾಕರ ಶೆಟ್ಟಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ ಸನಿಲ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ. ಫಣಿರಾಜ್, ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಎಸ್ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾರ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಕೆ. ಅಶ್ರಫ್, ತೀರ್ಥಹಳ್ಳಿ ಮುಸ್ಲಿಂ ಒಕ್ಕೂಟದ ಹಾಜಿ ಸುಲೈಮಾನ್ ಸಾಹೇಬ್ ಹಾಗೂ ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನ ಇಮ್ತಿಯಾಝ್ ಅಹ್ಮದ್ ಉರ್ಮ ಶೇಖ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಒಕ್ಕೂಟದ ಹಿರಿಯ ಉಪಾಧ್ಯಕ್ಷ ಮುಹಮ್ಮದ್, ಮಾಜಿ ಅಧ್ಯಕ್ಷರಾದ ಅಶ್ಫಾಕ್ ಅಹಮದ್ ಕಾರ್ಕಳ ಮತ್ತು ಇಬ್ರಾಹಿಂ ಸಾಹೇಬ್ ಕೋಟ, ತಾಲೂಕು ಅಧ್ಯಕ್ಷರಾದ ಎಸ್.ಎಂ. ಇರ್ಶಾದ್ ನೇರ್ಜಾ, ಎಸ್. ದಸ್ತಗಿರಿ ಕಂಡ್ಲೂರು, ಮುಹಮ್ಮದ್ ಗೌಸ್ ಮಿಯಾರು, ನರ್ಸೀ ಅಹ್ಮದ್, ತಾಜುದ್ದೀನ್ ಇಬ್ರಾಹಿಂ ಹಾಗೂ ಶಮ್ಸ್ ತಬ್ರೇಝ್ ನಾಗೂರು ಉಪಸ್ಥಿತರಿದ್ದರು.
ಹಾಫಿಝ್ ಅಬ್ದುಲ್ ರಹ್ಮಾನ್ ಅಶ್ರಫ್ ಕುರಾನ್ ಪಠಿಸಿದರು. ಕಾರ್ಯಕ್ರಮದ ಸಂಚಾಲಕ ಮೌಲಾನ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದಲ್ಲಿ ಸಚಿವ ರಿಝ್ವಾನ್ ಅರ್ಷದ್ ಅವರಿಗೆ ‘ಮಾನವ ರತ್ನ’, ನಟ ಪ್ರಕಾಶ್ ರಾಜ್ ಅವರಿಗೆ ‘ಮಾನವ ರತ್ನ’, ದುಬೈ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಅವರಿಗೆ ‘ಸೇವಾ ರತ್ನ’ ಹಾಗೂ ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲ್ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳೊಂದಿಗೆ ತಲಾ 50 ಸಾವಿರ ರೂ. ನಗದು ಪುರಸ್ಕಾರವನ್ನೂ ನೀಡಲಾಯಿತು.
ಪ್ರಕಾಶ್ ರಾಜ್ ಅವರು ತಮ್ಮ ನಗದು ಪುರಸ್ಕಾರವನ್ನು ಎಸ್ಐಆರ್ ಹೋರಾಟಕ್ಕಾಗಿ ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್ ಅವರಿಗೆ ಹಸ್ತಾಂತರಿಸಿದರು. ಹಿದಾಯತುಲ್ಲಾ ಅಬ್ಬಾಸ್ ಅವರು ತಮ್ಮ ನಗದು ಪುರಸ್ಕಾರವನ್ನು ಹೂಡೆಯ ಸರ್ಕಾರಿ ಶಾಲೆಯ ಉದ್ದೇಶಕ್ಕಾಗಿ ಉಸ್ತಾದ್ ಸಾದಿಕ್ ಅವರಿಗೆ ನೀಡಿದರು. ಸುರೇಶ್ ಭಟ್ ಅವರು ಹಿಂತಿರುಗಿಸಿದ ನಗದು ಮೊತ್ತವನ್ನು ಒಕ್ಕೂಟದ ಅಧ್ಯಕ್ಷರು ಎಸ್ಐಆರ್ ಹೋರಾಟಕ್ಕಾಗಿ ಕೆ.ಎಲ್. ಅಶೋಕ್ ಅವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಬಿಪಿನ್ ಚಂದ್ರಪಾಲ್ ಕಾರ್ಕಳ, ಜೆರಾಲ್ಡ್ ಪಿಂಟೊ ಉಡುಪಿ, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಸಾಮಾಜಿಕ ಹೋರಾಟಗಾರ್ತಿ ಗೀತಾ ಸುರೇಶ್ ಕುಮಾರ್ ಬೈಂದೂರು ಹಾಗೂ ಲೇಖಕಿ ಫಾತಿಮಾ ರಲಿಯಾ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು.












