ರೈತರ ಉತ್ಪನ್ನಗಳಿಗೆ ಬೆಂಬಲ ನೀಡುವ ಅಗತ್ಯವಿದೆ : ರಾಜೇಶ್ ಕಾವೇರಿ
ಬ್ರಹ್ಮಾವರ: ದಕ್ಷಿಣ ಕನ್ನಡ ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ಬ್ರಹ್ಮಾವರ ಶಾಖೆಯ ಉದ್ಘಾಟನೆ ಸಿಟಿ ಸೆಂಟರ್ ಕಟ್ಟಡದಲ್ಲಿ ಶನಿವಾರ ಜರುಗಿತು.
ಡಿಕೆ ಗ್ರೂಪ್ ಆಫ್ ಕಂಪೆನಿಸ್ ಸಂಸ್ಥಾಪಕರಾದ ಆಲ್ವಿನ್ ಜೊಯೆಲ್ ನೊರೊನ್ಹಾ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಲಾರಿ ಮಾಲಿಕರ ಅಧ್ಯಕ್ಷರಾದ ರಾಜೇಶ್ ಕಾವೇರಿ ಮಾತನಾಡಿ ಭಾರತ ಕೃಷಿ ಪ್ರಧಾನ ದೇಶ ಎಂದು ಭಾಷಣಗಳಿಗೆ ಸೀಮಿತವಾಗಿದ್ದು ಕೃಷಿಯನ್ನು ನಂಬಿಕೊಂಡು ಬಂದಿರುವ ರೈತರಿಗೆ ಸಿಗುವ ಸಹಕಾರ ತುಂಬಾ ಕಡಿಮೆ ಎನ್ನಬಹುದು. ಕೃಷಿಕರು ಹೊಸ ಸಾವಯವ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಹಲವಾರು ಯೋಜನೆಗಳು ಇದ್ದು ನೂತನ ಕಂಪೆನಿಯಿಂದ ರೈತರಿಗೆ ಉತ್ತೇಜಿಸುವ ಕೆಲಸ ನಡೆಯಲಿ. ಸಂಸ್ಥೆಯ ಲಾಭದತ್ತ ಹೋಗುವುದರೊಂದಿಗೆ ಅದರ ಹೆಚ್ಚಿನ ಪಾಲು ರೈತರಿಗೆ ಲಭಿಸುವಂತಾಗಲಿ. ರೈತರ ಉತ್ಪನ್ನಗಳಿಗೆ ಬೆಂಬಲ ನೀಡುವ ಕೆಲಸ ಸಂಸ್ಥೆಯಿಂದ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಟಿಎಪಿಸಿಎಮ್ ಎಸ್ ಉಡುಪಿ ತಾಲೂಕು ಅಧ್ಯಕ್ಷರಾದ ಅಶೋಕ್ ಶೆಟ್ಟಿ ಮೈರ್ಮಾಡಿ ಮಾತನಾಡಿ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಆರಂಭವಾದ ಸಹಕಾರಿ ಸಂಸ್ಥೆಗಳು ಇಂದು ತಮ್ಮ ವೈಯುಕ್ತಿಕ ಲಾಭಕ್ಕೆ ಹೆಚ್ಚಿನ ಗಮನ ನೀಡುತ್ತಿರುವುದು ಸಾಮಾನ್ಯವಾಗಿದೆ. ನೂತನವಾಗಿ ಆರಂಭವಾಗಿರುವ ರೈತ ಉತ್ಪಾದಕ ಕಂಪೆನಿ ರೈತರ ಏಳಿಗೆಗೆ ಮೊದಲ ಗಮನ ನೀಡಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಉಡುಪಿ ತಾಲೂಕು ಕೈಗಾರಿಕಾ ಸೊಸೈಟಿ ಬ್ಯಾಂಕ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಅರುಣ್ ಶೆಟ್ಟಿ ಮಾತನಾಡಿ ಸಾವಯವ ಕೃಷಿ ಮಾಡುವ ರೈತರಿಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಆರಂಭವಾಗಿರುವ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ, ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಚೇರ್ಕಾಡಿಯ ಪ್ರಗತಿಪರ ಕೃಷಿಕ ಮಂಜುನಾಥ ನಾಯಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ರೇವಣ್ಣ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಸತೀಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಿ ಎಸ್ ಸಂಗೀತಾ ನಾಯಕ್, ನಿರ್ದೇಶಕರಾದ ಕಿರಣ್ ಬಂಗೇರಾ, ಕೃಷ್ಣಪ್ಪ ಮಡಿವಾಳ, ದಯಾನಂದ ಪಿಜಕ್ಕಳ, ಸೀತಾರಾಮ ನಾಯ್ಕ್, ಅಜೀಜ್ ಎನ್ ಕುಂಡೋಳಿ ಹಾಗೂ ಇತರರು ಉಪಸ್ಥಿತರಿದ್ದರು.












